ಚಿಕ್ಕಮಗಳೂರು : ನಾ.ಸು.ಹರ್ಡೀಕರ್ ಅವರ ಆದರ್ಶಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು : ಜಗದೀಶಾಚಾರ್.

308
firstsuddi

ಚಿಕ್ಕಮಗಳೂರು : ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡೀಕರ್ ಅವರ ಆದರ್ಶಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಸಲಹೆ ಮಾಡಿದರು.

ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಇಂದು ಏರ್ಪಡಿಸಿದ್ದ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡೀಕರ್ ಅವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾ.ಸು.ಹರ್ಡೀಕರ್ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಅಪ್ರತಿಮ ದೇಶಭಕ್ತರು, ಭಾರತ ಸೇವಾದಳವನ್ನು ಸ್ಥಾಪಿಸಿ ಅದರ ಮೂಲಕ ಲಕ್ಷಾಂತರ ರಾಷ್ಟ್ರಭಕ್ತರು, ದೇಶಪ್ರೇಮಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಮಹಾತ್ಮರು ಎಂದು ಹೇಳಿದರು.

ನಾ.ಸು.ಹರ್ಡೀಕರ್ ಅವರ ಸಂದೇಶಗಳನ್ನು ಮತ್ತು ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಂಡರೆ ಅವರಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ, ಸಮರ್ಪಣಾ ಮನೋಭಾವ ಮತ್ತು ಶಿಸ್ತು ತಾನಾಗೇ ಬೆಳೆಯುತ್ತದೆ ಎಂದು ತಿಳಿಸಿದರು.

ದೇಶದಲ್ಲಿಂದು ಸಾಕ್ಷರತೆ ಇದೆ. ಎಲ್ಲಾ ಸಂಪನ್ಮೂಲಗಳೂ ಹೇರಳವಾಗಿದೆ. ಆದರೆ ದೇಶಭಕ್ತಿ, ರಾಷ್ಟ್ರಪ್ರೇಮ, ಸಮರ್ಪಣಾ ಮನೋಭಾವ ಮತ್ತು ಶಿಸ್ತಿನ ಕೊರತೆಯಿದೆ. ಇದರಿಂದಾಗಿ ರಾಷ್ಟ್ರದ ಅಭಿವೃದ್ದಿಗೆ ತೊಡಕಾಗಿದೆ ಎಂದು ವಿಷಾಧಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಇ.ಲೋಕೇಶ್ವರಾಚಾರ್ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಶಿಸ್ತನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷ ಶಾಲೆಯಲ್ಲಿ ನಾ.ಸು.ಹರ್ಡೀಕರ್ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಹರ್ಡೀಕರ್ ಅವರ ಜನ್ಮದಿನಾಚರಣೆ ಯನ್ನು ಕೈಬಿಡಬಾರದು ಎಂಬ ಉದ್ದೇಶದಿಂದ ಈ ಬಾರಿ ಕೊರೊನಾ ನಡುವೆ ಸರಳವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಹೊರಗಿಟ್ಟು ಸಮಾರಂಭವನ್ನು ಸರಳವಾಗಿ ನಡೆಸಲಾಯಿತು. ನಿವೃತ್ತ ಪಶು ವೈದ್ಯಾಧಿಕಾರಿ ಸಿ.ಕೆ.ಆರ್.ಮೂರ್ತಿ ಉಪಸ್ಥಿತರಿದ್ದರು.