ಚಿಕ್ಕಮಗಳೂರು : ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರು ನಿವೃತ್ತಿ ನಂತರವೂ ಜನಮಾಸನದಲ್ಲಿ ಉಳಿಯುತ್ತಾರೆ :ಎಸ್.ಆರ್.ಮಂಜುನಾಥ್.

280
firstsuddi

ಚಿಕ್ಕಮಗಳೂರು : ಪ್ರಾಮಾಣಿಕವಾಗಿ ಮತ್ತು ಜನಪರವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಮತ್ತು ನೌಕರರು ನಿವೃತ್ತಿ ನಂತರವೂ ಜನಮಾಸನದಲ್ಲಿ ಉಳಿಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಹೇಳಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಸೇವೆಯಿಂದ ನಿವೃತ್ತರಾದ ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಅವರಿಗೆ ಬೀಳ್ಕೊಡುಗೆ ನೀಡಿ ಅವರು ಮಾತನಾಡಿದರು.

ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿಗಳು ಸೇವಾವಧಿಯಲ್ಲಿ ಗಳಿಸಿದ ಹಣ ಶಾಶ್ವತವಲ್ಲ, ಅಧಿಕಾರ, ಅಂತಸ್ತು ಸಹ ಕೊನೆಯವರೆಗೂ ಉಳಿಯುವುದಿಲ್ಲ. ಆದರೆ ಸೇವಾವಧಿಯಲ್ಲಿ ಮಾಡಿದ ಪ್ರಾಮಾಣಿಕ ಕೆಲಸ, ಜನಪರ ಕಾರ್ಯ ಅವರ ನೆನಪನ್ನು ಜನರ ಮನಸ್ಸಿನಲ್ಲಿ ಉಳಿಸುತ್ತದೆ ಎಂದರು.

ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ಈ ಸತ್ಯವನ್ನು ಅರಿಯಬೇಕು. ತಮಗೆ ದೊರೆತಿರುವ ಹುದ್ದೆ ಜನಸೇವೆ ಮಾಡಲು ಸಿಕ್ಕಿರುವ ಅವಕಾಶ ಎಂದು ಭಾವಿಸಬೇಕು. ಬಡವರು, ಅಶಕ್ತರು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಅವರ ಕಾರ್ಯಚಟುವಟಿಕೆ, ಅಧಿಕಾರಿಯಾಗಿ ಅವರ ಸರಳತೆ, ಸಜ್ಜನಿಕೆ ಉಳಿದವರಿಗೆ ಮಾದರಿಯಾಗಬೇಕು ಎಂದು ಸಲಹೆ ಮಾಡಿದರು.

ಸೇವೆಯಿಂದ ನಿವೃತ್ತರಾದ ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಅವರನ್ನು ಕಛೇರಿಯ ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ಮತ್ತು ಶಿಕ್ಷಕರು ಸಮಾರಂಭದಲ್ಲಿ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಅಧಿಕಾರಿಯಾಗಿ, ಶಿಕ್ಷಕನಾಗಿ ಮೂರು ದಶಕಗಳ ಕಾಲ ಸಲ್ಲಿಸಿರುವ ಸೇವೆ ತಮಗೆ ತೃಪ್ತಿ ತಂದಿದೆ ಎಂದರು.

ತಮ್ಮ ಸೇವಾವಧಿಯಲ್ಲಿ ಅನೇಕ ಜಿಲ್ಲಾ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ನಡೆಸಲಾಗಿದ್ದು ದೈಹಿಕ ಶಿಕ್ಷಕರು ತಮಗೆ ಸಂಪೂರ್ಣ ಸಹಕಾರ ನೀಡಿದ್ದರಿಂದಾಗಿ ಅವುಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದು ತಿಳಿಸಿದರು. ತಮ್ಮ ಸೇವಾವಧಿಯಲ್ಲಿ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದಲ್ಲಿ ಮಾತನಾಡಿದ ಬಹುತೇಕ ಅಧಿಕಾರಿಗಳು, ನೌಕರರು ರವಿಕುಮಾರ್ ಅವರ ಕಾರ್ಯಚಟುವಟಿಕೆ, ಸರಳತೆ, ಸಜ್ಜನಿಕೆಯನ್ನು ಶ್ಲಾಘಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಕೃಷ್ಣಮೂರ್ತಿರಾಜ್ ಅರಸ್, ವೀರೇಶ್ ಕೌಲಗಿ, ಜಗದೀಶ್, ಕಛೇರಿ ಅಧೀಕ್ಷಕ ಸಂತೋಷ್, ವ್ಯವಸ್ಥಾಪಕ ಅಶೋಕ್‍ಕುಮಾರ್ ಉಪಸ್ಥಿತರಿದ್ದರು.