ಚಿಕ್ಕಮಗಳೂರು : ಭಾವೈಕ್ಯತೆ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು, ಅದು ಎಲ್ಲರ ಬದುಕಿನಲ್ಲೂ ಹಾಸುಹೊಕ್ಕಾಗಬೇಕು : ಐ.ಬಿ.ಶಂಕರ್.

471
firstsuddi

ಚಿಕ್ಕಮಗಳೂರು : ಭಾವೈಕ್ಯತೆ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು, ಅದು ಎಲ್ಲರ ಬದುಕಿನಲ್ಲೂ ಹಾಸುಹೊಕ್ಕಾಗಬೇಕು ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಭಾವೈಕ್ಯತೆ ಕೇವಲ ಭಾಷಣದ ವಸ್ತುವಾಗಿದೆ, ರಾಜಕಾರಣಿಗಳ ನಡೆಯಿಂದಾಗಿ ಭಾವೈಕ್ಯತೆ ಹಾಳಾಗಿದೆ, ವೇದಿಕೆಯ ಮೇಲೆ ಸಾಮರಸ್ಯ ಮತ್ತು ಸಹಬಾಳ್ವೆಯ ಕುರಿತು ಉದ್ದುದ್ದ ಭಾಷಣ ಮಾಡುವವರು ತಮ್ಮ ಬದುಕಿನಲ್ಲಿ ಅದನ್ನು ಆಚರಣೆಗೆ ತರುತ್ತಿಲ್ಲ ಎಂದು ವಿಷಾದಿಸಿದರು.
ಇದರಿಂದಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಭಾವೈಕ್ಯತೆಯ ಕನಸು ನನಸಾಗದೇ ಉಳಿದಿದೆ. ದೇಶ ಅಶಾಂತಿಯ ಬೀಡಾಗಿದೆ ಎಂದ ಅವರು ಭಾವೀ ಪ್ರಜೆಗಳಾದ ಇಂದಿನ ಮಕ್ಕಳಾದರೂ ಭಾವೈಕ್ಯತೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸಹಬಾಳ್ವೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಂಕರೇಗೌಡ ಮಾತನಾಡಿ ವಿದ್ಯಾರ್ಥಿಗಳು ಸಾಧಕರಾಗುವ ನಿಟ್ಟಿನಲ್ಲಿ ಶಿಸ್ತು, ಧೈರ್ಯ, ಛಲ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಮಕ್ಕಳಲ್ಲಿ ಭಾವೈಕ್ಯತೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಶಾಲೆಯಲ್ಲಿ ಭಾವೈಕ್ಯತಾ ಸಪ್ತಾಹ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಪ್ತಾಹದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಖಜಾಂಚಿ ಕುಮಾರಸ್ವಾಮಿ, ವಿವಿಧ ಶಾಲೆಗಳ ಶಿಕ್ಷಕರಾದ ವೇದಾವತಿ, ಅಕ್ಷತಾ, ಪುನೀತ್ ಉಪಸ್ಥಿತರಿದ್ದರು.