ಚಿಕ್ಕಮಗಳೂರು : ಭ್ರಷ್ಟಾಚಾರ ಹಾಗೂ ನಿಯಮ ಬಾಹಿರ ಕಾರ್ಯಕ್ಕೆ ಆಸ್ಪದ ನೀಡದೆ ಬ್ಯಾಂಕನ್ನು ಆರ್ಥಿಕತೆಯತ್ತ ಕೊಂಡೊಯ್ಯಲಾಗುವುದು ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಡಿ.ಎಸ್. ಸುರೇಶ್ ಅವರು ಹೇಳಿದರು.
ಅವರು ನಗರದ ಡಿ.ಸಿ.ಸಿ ಬ್ಯಾಂಕ್ ಕಛೇರಿ ಸಭಾಂಗಣದಲ್ಲಿ ಡಿ.ಸಿ.ಸಿ ಬ್ಯಾಂಕ್ ನೌಕರರ ಸಂಘದ ವತಿಯಿಂದ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಬ್ಯಾಂಕಿನ ಆರ್ಥಿಕತೆಯನ್ನು ಪರಿಶೀಲಿಸಿ ವಿಶೇಷವಾಗಿ ಒತ್ತು ನೀಡುವ ಮೂಲಕ ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದರು.
ರಾಜ್ಯದಲ್ಲಿ ಎಲ್ಲಾ ಬ್ಯಾಂಕುಗಳಿಂದ ಜಿಲ್ಲಾ ಸಹಕಾರ ಬ್ಯಾಂಕ್ ಹಲವು ಸುಧಾರಣೆಗಳ ಮೂಲಕ ಮಾದರಿಯಾಗಬೇಕು ಇದಕ್ಕಾಗಿ ಎಲ್ಲಾ ನಿರ್ದೇಶಕರುಗಳು ಶ್ರಮವಹಿಸಬೇಕು. ಬ್ಯಾಂಕಿನಲ್ಲಿ ಶೇರು ಬಂಡವಾಳ ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದ ಅವರು ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕುಗಳ ಕಡೆಗೆ ಗ್ರಾಹಕರು ಹೆಚ್ಚು ಒಲವು ತೋರುತ್ತಿದ್ದು, ಅವರನ್ನು ನಮ್ಮ ಬ್ಯಾಂಕಿನ ಕಡೆಗೆ ಗಮನಹರಿಸುವಂತೆ ಸುಧಾರಣೆ ತರಬೇಕು ಎಂದು ಹೇಳಿದರು.
ಡಿ.ಸಿ.ಸಿ ಬ್ಯಾಂಕ್ ಸೇರಿದಂತೆ ಯಾವುದೇ ಸಹಕಾರಿ ಬ್ಯಾಂಕುಗಳಲ್ಲಿ ಭ್ರಷ್ಟಾಚಾರ, ನಿಯಮಬಾಹಿರ ಕೆಲಸಗಳಿಗೆ ಅವಕಾಶ ನೀಡದೆ ಕಾರ್ಯ ನಿರ್ವಹಿಸಿ ರೈತ ಹಾಗೂ ಜನಸ್ನೇಹಿಯಾಗಿ ಸೇವೆ ಸಲ್ಲಿಸುವಂತೆ ತಿಳಿಸಿದರು.
ವಿಧಾನಪರಿಷತ್ ಉಪ ಸಭಾಪತಿ ಹಾಗೂ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎಲ್. ಧರ್ಮೇಗೌಡ ಅವರು ಮಾತನಾಡಿ ಬ್ಯಾಂಕಿನಿಂದ ನೀಡುವ ಸೌಲಭ್ಯಗಳು ಸಕಾಲದಲ್ಲಿ ಮರುಪಾವತಿ ಮಾಡಿಕೊಳ್ಳಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ. ನಾವು ಮಾಡುವ ಕೆಲಸಗಳು ಶಾಶ್ವತ. ನಮ್ಮ ಅವಧಿಯಲ್ಲಿ ಡಿ.ಸಿ.ಸಿ ಬ್ಯಾಂಕ್ ಉತ್ತಮ ಕಾರ್ಯ ನಿರ್ವಹಿಸುವ ಮೂಲಕ ನಬಾರ್ಡ್ ನಿಂದಲೂ ಪ್ರಶಸ್ತಿ ಪಡೆದಿತ್ತು. ಅದರಂತೆ ಮುಂದಿನ ದಿನಗಳಲ್ಲಿಯೂ ಅಧ್ಯಕ್ಷರು, ಹಾಗೂ ಆಡಳಿತ ವರ್ಗದವರು ಉತ್ತಮ ರೀತಿಯಲ್ಲಿ ಸೇವೆ ನೀಡುವ ಮೂಲಕ ಜನಸ್ನೇಹಿಯಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರಮೇಶ್, ನಿರ್ದೇಶಕರುಗಳಾದ ಹಳಸೆ ಶಿವಣ್ಣ, ಮುಗುಳುವಳ್ಳಿ ನಿರಂಜನ್, ಸತೀಶ್, ಪರಮೇಶ್, ಕೆ.ಆರ್. ಆನಂದಪ್ಪ, ಶಂಕರಪ್ಪ, ಡಿ.ಸಿ.ಸಿ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ್, ನಿರ್ದೇಶಜರಾದ ಬಾಲಕೃಷ್ಣ, ಪ್ರಸನ್ನ, ವಿಜಯ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಬ್ಯಾಂಕನ್ನು ಆರ್ಥಿಕತೆಯತ್ತ ಕೊಂಡೊಯ್ಯಲಾಗುವುದು : ಡಿ.ಎಸ್. ಸುರೇಶ್.










