ಮಂಜೂರಾದ ಭೂಮಿಯನ್ನು ರದ್ದುಪಡಿಸದಂತೆ ಜಿಲ್ಲಾಡಳಿತಕ್ಕೆ ಮನವಿ…

126
firstsuddi

ಚಿಕ್ಕಮಗಳೂರು : ತಮಗೆ ಈ ಹಿಂದೆ ಮಂಜೂರು ಮಾಡಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು ಎಂದು ಕಡೂರು ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ನಿನ್ನೆ ಭೇಟಿ ಮಾಡಿದ ಉಡುಗೆರೆ, ಗುಡ್ಡೇಹಳ್ಳಿ, ಮುಗಳೀಕಟ್ಟೆ, ಕೊತ್ತಿಗೆರೆ, ಗುಜ್ಜೇನಹಳ್ಳಿ, ಅಣ್ಣೀಗೆರೆ ನರಸೀಪುರ, ಜೋಡಿಹೊಚಿಹಳ್ಳಿ, ನಿಡಘಟ್ಟ, ಬ್ಯಾಲದಾಳು ಮತ್ತು ಚೀರನಹಳ್ಳಿ ರೈತರು ಈ ಸಂಬಂಧ ಮನವಿ ಸಲ್ಲಿಸಿದರು.

ನಾವುಗಳು ಬಡ ಭೂಹೀನ ರೈತರಾಗಿದ್ದು ನಮಗೆ ಭೂಮಿ ಮಂಜೂರು ಮಾಡುವಂತೆ ಕಳೆದ 30 ವರ್ಷಗಳ ಹಿಂದೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರ ಪ್ರಕಾರ 55 ಬಡ ಕುಟುಂಬಗಳಿಗೆ ತಲಾ 2 ರಿಂದ 4 ಎಕರೆ ವರೆಗೆ ಭೂ ಮಂಜೂರಾತಿ ನೀಡಿ ಖಾತೆ ಮಾಡಿಕೊಡಲಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ನಾವುಗಳು ಕಂದಾಯ ಪಾವತಿಸಿಕೊಂಡು ಮೂರು ದಶಕಗಳಿಂದ ಮಂಜೂರಾದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬದುಕುತ್ತಿದ್ದೆವೆ ಎಂದ ರೈತರು ಆದರೆ ಇತ್ತೀಚೆಗೆ ಅಧಿಕಾರಿಗಳು ನಮಗೆ ಮಂಜೂರಾದ ಭೂಮಿಯನ್ನು ರದ್ದು ಪಡಿಸಲು ಮುಂದಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

10-15 ಎಕರೆ ಭೂಮಿ ಹೊಂದಿರುವ ಶ್ರೀಮಂತರ ತಂಟೆಗೆ ಹೋಗದೆ ಕಡು ಬಡವ ರಾದ ನಮ್ಮ ಭೂಮಿಯನ್ನು ವಜಾಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದ ಅವರು ಮಂಜೂರಾದ ಭೂಮಿಯನ್ನು ವಜಾಗೊಳಿಸಿದಲ್ಲಿ ನಮ್ಮ ಕುಟುಂಬಗಳು ಭೂಮಿ ಇಲ್ಲದೆ ಬೀದಿ ಪಾಲಾಗುತ್ತವೆ ಎಂದು ಹೇಳಿದರು.

ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಹಿಂದಿದ್ದ ಅಧಿಕಾರಿಗಳು ಶಾಸಕರ ಸಮಿತಿಯ ಮುಂದೆ ಅರ್ಜಿಗಳನ್ನು ಮಂಡಿಸದೆ ನೇರವಾಗಿ ಕೆಲವರಿಗೆ ಭೂ ಮಂಜೂರು ಮಾಡಿರುವುದರಿಂದ ಅದು ಅಕ್ರಮವಾಗುತ್ತದೆ. ಅಕ್ರಮ ಮಂಜೂರಾತಿ ಬಗ್ಗೆ ಸಮಗ್ರ ತನಿಖೆ ನಡೆಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಬಿಎಸ್‍ಪಿ ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ರೈತರಾದ ರವಿ, ಗಂಗಮ್ಮ, ಪ್ರೇಮ, ನಾಗರತ್ನಮ್ಮ, ಲಲಿತಮ್ಮ, ಎಸ್.ಬಿ.ಲೋಕೇಶ್, ಹಾಲಪ್ಪ, ಎಸ್. ಮಲ್ಲಿಕಾರ್ಜುನ, ಹಾಜರಿದ್ದರು.