ಬೆಂಗಳೂರು : ಬೆಳಗಾವಿ ಜಿಲ್ಲೆಯಲ್ಲಿ 4 ಕೋಟಿ ರೂಪಾಯಿ ಕಾಮಗಾರಿಗೆ ನಾನು ಕಮಿಷನ್ ಕೇಳುತ್ತಿದ್ದೇನೆ ಎಂಬ ಆರೋಪ ಬರುತ್ತಿದೆ. ಸಂತೋಷ್ ಕೆ ಪಾಟೀಲ್ ಎಂಬುವವರು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ನಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಸಂತೋಷ್ ಪಾಟೀಲ್ ಅವರು ಉಲ್ಲೇಖಿಸಿರುವ ಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯು ಅನುಮೋದನೆಯನ್ನೇ ನೀಡಿಲ್ಲ. ಸರ್ಕಾರವು ಯಾವುದೇ ಕಾಮಗಾರಿಯನ್ನು ಮಂಜೂರು ಮಾಡಿಲ್ಲ ಹಾಗೂ ಆದೇಶವನ್ನೂ ನೀಡಿಲ್ಲ. ಆಡಳಿತಾತ್ಮಕ ಅನುಮೋದನೆ ಸಹ ನೀಡಿಲ್ಲ ಎಂದು ನಮ್ಮ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಹೇಳಿದ್ದಾರೆ. ಇದಕ್ಕೆ ಯಾವುದೇ ಆಡಳಿತಾತ್ಮಕ ಅನುಮೋದನೆಯಾಗದೆ ನಾನು ಹೇಗೆ ಕಮಿಷನ್ ಕೇಳಲಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾತನಾಡಿದ ಸಚಿವರು, ನನ್ನ ವಿರುದ್ಧ ಸಂತೋಷ್ ಪಾಟೀಲ್ ಎಂಬ ವ್ಯಕ್ತಿ ದೆಹಲಿಗೆ ಹೋಗಿ ದೂರು ಕೊಟ್ಟಿದ್ದಾರೆ. ಸಂತೋಷ್ ಪಾಟೀಲ್ ಎನ್ನುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಯಾವುದೋ ಷಡ್ಯಂತ್ರ ನಡೆದಿದೆ. ನನ್ನ ವಿರುದ್ಧ ನಮ್ಮ ಪಕ್ಷದ ನಾಯಕರಿಗೆ ಹಾಗೂ ಕೇಂದ್ರ ಸಚಿವರಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ ಎಂದು ನಿನ್ನೆಯಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಸುದ್ದಿಗೋಷ್ಠಿ ಮಾಡಿದ್ದರು. ನಮ್ಮ ಇಲಾಖೆಯಿಂದ ಯಾವುದೇ ಕಾರ್ಯಾದೇಶ ಕೊಟ್ಟಿಲ್ಲ. ಕೆಲಸವೇ ಮಾಡಿಸಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ಈಗಾಗಲೇ ನ್ಯಾಯಾಲಯವು ಹೇಳಿಕೆ ಪಡೆದಿದೆ ಎಂದರು.
ಸಂತೋಷ್ ಮಾಡಿರುವ ಆರೋಪವನ್ನೇ ಆಧಾರವಾಗಿ ಇರಿಸಿಕೊಂಡು ಕಾಂಗ್ರೆಸ್ ನಾಯಕರಾದ ಹನುಮಂತಯ್ಯ, ಹುಸೇನ್, ಸುರೇಶ್, ಚಂದ್ರಶೇಖರ್ ಸುದ್ದಿಗೋಷ್ಠಿ ಮಾಡಿದ್ದಾರೆ. ಕಾಂಗ್ರೆಸ್ ಇಷ್ಟು ವರ್ಷ ಆಡಳಿತ ಮಾಡಿದೆ. ವರ್ಕ್ ಆರ್ಡರ್ ಇಲ್ಲದೆ ಯಾರಿಗಾದರೂ ಕಾಮಗಾರಿಗಳನ್ನು ವಹಿಸಿಕೊಡಲು ಸಾಧ್ಯವೇ? ಇವರಿಗೆ ಅಷ್ಟೂ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದರು. ನಡೆಯುವವನ ಮೇಲೆ ಕಲ್ಲು ಹೊಡೆಯುವುದು. ಮಲಗಿದವನ ಮೇಲೆ ಅಲ್ಲ. ಹಾಗಾಗಿ, ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಕಲ್ಲು ಹೊಡೆಯುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಗೆ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.










