ಚಿಕ್ಕಮಗಳೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜ್ಯಾತ್ಯಾತೀತ ಜನತಾದಳ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸುಧಾಕರ್ ಎಸ್.ಶೆಟ್ಟಿ ಹೇಳಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ನಿನ್ನೆ ನಡೆದ ಪಕ್ಷದ ಜಿಲ್ಲಾ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿಯ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ, ದಿನಬಳಕೆ ವಸ್ತುಗಳ ಏರಿಕೆಯಿಂದ ರೋಸಿ ಹೋಗಿದ್ದಾರೆ, ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಭಿವೃದ್ದಿ ಕಾರ್ಯಗಳು ಮತ್ತು ಜನಪರ ಯೋಜನೆಗಳನ್ನು ಮನವರಿಕೆ ಮಾಡಿಕೊಂಡಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ 2023ರ ಚುನಾವಣೆಗೆ ಪಕ್ಷದ ಜಿಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಈಗಿನಿಂದಲೇ ಸಿದ್ದತೆ ನಡೆಸಬೇಕು, ತಳಮಟ್ಟದಿಂದ ಪಕ್ಷವನ್ನು ಸಧೃಡಗೊಳಿಸಲು ಮುಂದಾಗಬೇಕು, ಜಿ.ಪಂ. ಮತ್ತು ತಾ.ಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ ಪಕ್ಷ ಸಧೃಡಗೊಳ್ಳಬೇಕಾದರೆ ವರಿಷ್ಠರು ಕಾರ್ಯಕರ್ತರ ನೋವು ಮತ್ತು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಮಾತನಾಡಿ ಪಕ್ಷ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದರೆ ಹೊರಗಡೆಯಿಂದ ಬಂದವರನ್ನು ಪಕ್ಷಕ್ಕೆ ಸಂಬಂಧವೇ ಇಲ್ಲದವರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಪರಿಪಾಠವನ್ನು ಕೈಬಿಟ್ಟು ಸ್ಥಳೀಯ ನಾಯಕರಿಗೇ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಈಗಲೇ ಘೋಷಿಸಬೇಕು, ಪಕ್ಷದಿಂದ ವಲಸೆ ಹೋದವರು ಮತ್ತು ತಟಸ್ಥರಾಗಿರುವರನ್ನು ಮತ್ತೆ ಕರೆತರುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.
ಪಕ್ಷದ ಮುಖಂಡರಾದ ಜಿ.ಎಸ್.ಚಂದ್ರಪ್ಪ, ಹೊಲದಗದ್ದೆ ಗಿರೀಶ್, ಭೈರೇಗೌಡ, ಮಂಜಪ್ಪ, ಎಂ.ಡಿ.ರಮೇಶ್, ಕೃಷ್ಣೇಗೌಡ, ಜಯರಾಜ್ ಅರಸ್, ಸಿ.ಎನ್.ದೇವರಾಜ್ ಅರಸ್, ಜಾಕೀರ್ ಹುಸೇನ್, ಹಳೇಹಟ್ಟಿ ಆನಂದನಾಯ್ಕ, ಮಾನು ಮಿರಾಂಡ, ಹುಣಸೆಮಕ್ಕಿ ಲಕ್ಷ್ಮಣ್ ಸಭೆಯಲ್ಲಿ ಪಾಲ್ಗೊಂಡಿದ್ದರು.










