ಚಿಕ್ಕಮಗಳೂರು : ಮೇಲ್‍ಮರವತ್ತೂರು ಶ್ರೀ ಆದಿಪರಾಶಕ್ತಿ ದೇವಿಯ ವಾರ್ಷಿಕ ಉತ್ಸವ…

195
firstsuddi

ಚಿಕ್ಕಮಗಳೂರು : ಮೇಲ್‍ಮರವತ್ತೂರು ಶ್ರೀ ಆದಿಪರಾಶಕ್ತಿ ದೇವಿಯ ವಾರ್ಷಿಕ ಉತ್ಸವ ಇಲ್ಲಿನ ಲಕ್ಷ್ಮೀಶ ನಗರದಲ್ಲಿ ನೂರಾರು ಭಕ್ತರ ನಡುವೆ ಶುಕ್ರವಾರ ವೈಭವದಿಂದ ನಡೆಯಿತು.
ಉತ್ಸವದ ಅಂಗವಾಗಿ ಬೆಳಿಗ್ಗೆ ಆದಿಶಕ್ತಿ ಪರಾಶಕ್ತಿ ಅಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಹೂವಿನ ಅರ್ಚನೆ, ಮಾಲಾಧಾರಿಗಳಿಂದ ಸಾಮೂಹಿಕ ಭಜನೆ, ಸ್ತ್ರೋತ್ರ ಪಠಣ, ಅಷ್ಟೋತ್ತರ, ನಾಮ ಸಂಕೀರ್ತನೆ ಜರುಗಿತು.
ಮಧ್ಯಾಹ್ನ ಮಹಾಮಂಗಳಾರತಿಯ ನಂತರ ಶ್ರೀ ಆದಿಪರಾಶಕ್ತಿ ಭಕ್ತ ಮಂಡಳಿಯಿಂದ ಬಡವರಿಗೆ ವಸ್ತ್ರದಾನ ಮಾಡಲಾಯಿತು, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಉತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಮಾತನಾಡಿದ ಭದ್ರಾವತಿಯ ಗುರುಸ್ವಾಮಿ ಭಾಗ್ಯಮ್ಮ ದೇವಾಲಯಗಳು, ರಥೋತ್ಸವಗಳು ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಪುಣ್ಯದ ಜೊತೆಗೆ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ, ಸಮಾಜದಲ್ಲಿ ಭಾವೈಕ್ಯತೆ ಮೂಡುತ್ತದೆ ಎಂದರು.
ಶ್ರೀ ಆದಿಶಕ್ತಿ ಪರಾಶಕ್ತಿ ಭಕ್ತ ಮಂಡಳಿ ಅಧ್ಯಕ್ಷ ಸಿ.ಬಿ.ನಾಗರಾಜ್ ಮಾತನಾಡಿ ಲೋಕಕಲ್ಯಾಣರ್ಥವಾಗಿ ಕಳೆದ 16 ವರ್ಷಗಳಿಂದ ನಿರಂತರವಾಗಿ ದೇವಿಯ ಉತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ರವಿ, ಶಾಸ್ತಾ ಗ್ರೂಪ್ಸ್‍ನ ಮುರಳಿ ಮೊದಲಿಯಾರ್, ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಜೆ.ಸತ್ಯನಾರಾಯಣ, ಭಕ್ತ ಮಂಡಳಿ ಖಜಾಂಚಿ ಮೂರ್ತಿ, ಸುಲಕ್ಷಣ, ಲಕ್ಷ್ಮಮ್ಮ, ಗಣೇಶ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.