ಚಿಕ್ಕಮಗಳೂರು : ನಮ್ಮ ಯುವಜನತೆ ವಿದೇಶಿ ವ್ಯಾಮೋಹ ಮತ್ತು ಅದರ ಅನುಕರಣೆಯನ್ನು ಬಿಟ್ಟರೆ ಮಾತ್ರ ಭಾರತೀಯ ಸಂಸ್ಕೃತಿ ಬೆಳೆದು ಭವ್ಯವಾಗುತ್ತದೆ ಎಂದು ನಗರದ ಶಾರದಾ ಮಠದ ಶ್ರೀ ಪ್ರವ್ರಾಜಿಕ ಶುಭವ್ರತ ಪ್ರಾಣಾ ಮಾತಾಜಿ ಹೇಳಿದರು.
ಕಡೂರು ತಾಲ್ಲೂಕಿನ ಜಿಗಣೆಹಳ್ಳಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಮಂಗಳವಾರ ನಡೆದ ಗುರು ವಂದನೆ ಮತ್ತು ರಸಯಾನ ಯುವರಂಗ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ, ಒಂದು ಕಾಲಕ್ಕೆ ಭವ್ಯವಾಗಿದ್ದ ನಮ್ಮ ಸಂಸ್ಕೃತಿ ನಿಧಾನವಾಗಿ ಕಳೆಗುಂದುತ್ತಿದೆ ಇದಕ್ಕೆ ಮೂಲ ಕಾರಣ ನಾವು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಅದರ ಅನುಕರಣೆ ಮಾಡುತ್ತಿರುವುದು ಎಂದು ವಿಷಾದಿಸಿದರು.
ಜಗತ್ತಿಗೇ ಮಾರ್ಗದರ್ಶನ ಮಾಡುತ್ತಿರುವ ಭಾರತೀಯ ಭವ್ಯ ಪರಂಪರೆ ಮತ್ತು ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ನಮ್ಮ ಯುವ ಜನತೆ ವಿವೇಕಾನಂದರ ಆಶಯದಂತೆ ಸಚ್ಚಾರಿತ್ರವಂತರಾಗಬೇಕು, ವಿದೇಶಿ ವ್ಯಾಮೋಹ ಬಿಡಬೇಕು, ಒಳ್ಳೆಯ ಗುಣಗಳನ್ನು ಕಲಿತು ಸತ್ಪುರುಷರಾಗಬೇಕು, ಸೇವೆ, ಸಹಾಯ, ಪರೋಪಕಾರ ಮಾಡಬೇಕು, ಆಧ್ಯಾತ್ಮದತ್ತ ವಾಲಬೇಕು ಎಂದು ಕಿವಿಮಾತು ಹೇಳಿದರು.
ರಸಯಾನ ಯುವ ರಂಗ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಹೆಚ್.ಸೋಮಶೇಖರ್ ರಂಗಭೂಮಿ ಬದುಕಿನ ಪ್ರಯೋಗಾಲಯವಿದ್ದಂತೆ, ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಅದು ಅತ್ಯುತ್ತಮ ಮಾಧ್ಯಮ. ಸಮಾಜವನ್ನು ಪರಿವರ್ತಿಸುವ ಶಕ್ತಿ ಅದಕ್ಕಿದೆ ಎಂದು ತಿಳಿಸಿದರು.
ನೀನಾಸಂ ಕಲಾವಿದೆ ಪ್ರತಿಭಾ ರಂಗಭೂಮಿ ಕುರಿತು ಉಪನ್ಯಾಸ ನೀಡಿದರು, ಗ್ರಾಮದ ಹಿರಿಯ ವಿದ್ಯಾರ್ಥಿಗಳು ತಮ್ಮ ವಿದ್ಯಾ ಗುರುಗಳಾದ ಬಾಣೂರು ಶ್ರೀ ಬಸವೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಬಿ.ಹೆಚ್.ಸೋಮಶೇಖರ್, ಮಲ್ಲೇಶಪ್ಪ, ಕುಮಾರಪ್ಪ, ರುದ್ರಪ್ಪ, ಈಶ್ವರಪ್ಪ, ನಾಗರಾಜು, ಮಹಾಲಕ್ಷ್ಮೀ, ರುದ್ರಪ್ಪ, ಲಿಂಗಪ್ಪ, ಶಿವಣ್ಣ, ಕಲ್ಲೇಶಪ್ಪ, ಮಹೇಶಪ್ಪ ಅವರುಗಳಿಗೆ ಸಮಾರಂಭದಲ್ಲಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.
ಇದೇ ವೇಳೆ ರಸಯಾನ ಯುವರಂಗ ಸಂಸ್ಥೆ ನಿರ್ಮಿಸಿರುವ ಬೇಟೆಯಾಟ ಕಿರು ಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಗ್ರಾಮದ ಮುಖಂಡ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು, ಬಸವೇಶ್ವರ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗವಿರಂಗಪ್ಪ, ಡಾ|| ಪ್ರಕಾಶ್, ಸಿ.ಗೋವಿಂದ ಸ್ವಾಮಿ ಉಪಸ್ಥಿತರಿದ್ದರು.