ಚಿಕ್ಕಮಗಳೂರು: ವೈಭವದಿಂದ ನಡೆದ ಸಿಡಿ ಮಹೋತ್ಸವ…

56
firstsuddi

ಚಿಕ್ಕಮಗಳೂರು: ನಗರ ಹೊರವಲಯದ ಹಿರೇಮಗಳೂರಿನಲ್ಲಿ ಗ್ರಾಮದೇವತೆಗಳಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮನವರ 70 ನೇ ವರ್ಷದ ಸಿಡಿ ಮಹೋತ್ಸವ ಸಹಸ್ರಾರು ಭಕ್ತರ ನಡುವೆ ಇಂದು ವೈಭವದಿಂದ ನಡೆಯಿತು.

ಸಿಡಿ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಶ್ರೀ ದುರ್ಗಾ, ಲಕ್ಷ್ಮಿ, ಸರಸ್ವತಿ ಸಹಿತ ಚಂಡಿಕಾ ಹೋಮ, ಕಲಾವೃದ್ಧಿ ಹೋಮ, ಕುಂಭಾಭಿಷೇಕ, ಮಧ್ಯಾಹ್ನ ಹೋಮದ ಪೂರ್ಣಾಹುತಿ, ಮಹಾಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿದವು.

ಸಿಡಿ ಅಂಗವಾಗಿ ಗ್ರಾಮದ ಇತಿಹಾಸ ಪ್ರಸಿದ್ಧ ಭಾರ್ಗವಪುರಿ ಶ್ರೀ ಕೋದಂಡರಾಮಚಂದ್ರ ಸ್ವಾಮಿಗೆ ದೇವಾಲಯದ ವತಿಯಿಂದ ಫಲ ಸಮರ್ಪಣೆ ಮಾಡಲಾಯಿತು. ಭಕ್ತರು ಬೆಳಿಗ್ಗೆ ಮುಡಿತೆಗೆದು ಹರಕೆ ಅರ್ಪಿಸಿದರು.

ಸಂಜೆಯಾಗುತ್ತಿದ್ದಂತೆ ಶ್ರೀ ಕರಾಳಮ್ಮ ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ಹೊರತಂದು ನಾದಸ್ವರ, ಚಾಮ, ಕೆಂಚರಾಯ, ಕೊಂಬು, ಕಹಳೆ ಸೇರಿದಂತೆ ಗ್ರಾಮೀಣ ವಾದ್ಯಗಳು, ಬೆಳ್ತಂಗಡಿಯ ಕಲಾತಂಡಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಉತ್ಸವ ಮೂರ್ತಿಗಳನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿದರು. ಮೆರವಣಿಗೆ ನಂತರ ಗ್ರಾಮದ ಮುಂಭಾಗದ ಶ್ರೀ ಅಂತರಘಟ್ಟಮ್ಮ ದೇವಾಲಯದ ಎದುರು ಸಾಲಕೃತಗೊಂಡು ಸಜ್ಜಾಗಿ ನಿಂತಿದ್ದ ಸಿಡಿಗಂಬಕ್ಕೆ ಮತ್ತು ಪಂಚಭೂತಗಳಿಗೆ ಪೂಜೆ ಸಲ್ಲಿಸಲಾಯಿತು.

ಉತ್ಸವವ ಮೂರ್ತಿಗಳನ್ನು ಸಿಡಿಗಂಬದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಈ ವೇಳೆ ಭಕ್ತರು ತಮ್ಮ ಮಕ್ಕಳನ್ನು ಸಿಡಿಗಂಬದಲ್ಲಿ ಕೂರಿಸಿ ಹರಕೆ ಸಮರ್ಪಿಸಿದರು. ಸಿಡಿ ಉತ್ಸವ ಆರಂಭವಾಗುತ್ತಿದ್ದಂತೆ ಸುತ್ತ ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ಸಿಡಿಗಂಬದತ್ತ ಬಾಳೆಹಣ್ಣನ್ನು ತೂರಿ ಸಂಭ್ರಮಿಸಿದರು. ಅರ್ಚಕ ಎಚ್. ಕೆ. ಶ್ರೀಧರ್ ಅವರ ನೇತೃತ್ವದಲ್ಲಿ ಉತ್ಸವದ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಸಿಡಿ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆಗಳನ್ನು ಸಿಂಗರಿಸಲಾಗಿತ್ತು. ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಹಸ್ರಾರು ಭಕ್ತರುಸಿಡಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ.ರವಿಶಂಕರ್, ಕಾರ್ಯದರ್ಶಿ ಡಿ.ಎಂ.ಶಂಕರ್, ಗ್ರಾಮದ ಶ್ರೀದೇವಿ ಕುಟುಂಬ ವರ್ಗದವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.