ಚಿಕ್ಕಮಗಳೂರು : ಶಾಲೆ ತೆರೆಯುವ ಮೂಲಕ ಹೆಣ್ಣುಮಕ್ಕಳೂ ಶಿಕ್ಷಣವಂತರಾಗುವಂತೆ ಮಾಡಿದವರು ಜ್ಯೋತಿ ಬಾಪುಲೆ : ಕೆ.ಟಿ.ರಾಧಾಕೃಷ್ಣ.

120
firstsuddi

ಚಿಕ್ಕಮಗಳೂರು : ಮಹಿಳೆಯರಿಗಾಗಿ ಶಾಲೆ ತೆರೆಯುವ ಮೂಲಕ ದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಮೊದಲ ಮಹಿಳೆ ಜ್ಯೋತಿ ಬಾಪುಲೆ ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಬಿಎಸ್‍ಪಿ ಕಛೇರಿಯಲ್ಲಿ ನಿನ್ನೆ ಏರ್ಪಡಿಸಿದ್ದ ಜ್ಯೋತಿ ಬಾಪುಲೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ದೇಶ ಮತ್ತು ಸಮಾಜ ಕಂಡ ಪರಿವರ್ತನೆಯ ಹರಿಕಾರರಾದ ಜ್ಯೋತಿ ಬಾಪುಲೆ ಸ್ವಾತಂತ್ರ್ಯ ಪೂರ್ವದಲ್ಲೇ ಅಂದಿನ ಕಾಲದಲ್ಲಿದ್ದ ಅಸ್ಪøಶ್ಯತೆ, ಅಸಮಾನತೆಯನ್ನು ಹೋಗಲಾಡಿಸಲು ಮತ್ತು ಶೋಷಿತರ ಏಳಿಗೆಗಾಗಿ ದುಡಿದವರು ಎಂದರು.

ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿ ಅಡುಗೆ ಮನೆಗೇ ಸೀಮಿತರಾಗಿ ಮನೆಯಿಂದ ಹೊರ ಬಾರದಂತಹ ಸ್ಥಿತಿಯಲ್ಲಿದ್ದ 1851 ರಲ್ಲಿ ಅವರಿಗಾಗಿ ಶಾಲೆ, ಗ್ರಂಥಾಲಯಗಳನ್ನು ತೆರೆಯುವ ಮೂಲಕ ಹೆಣ್ಣು ಮಕ್ಕಳೂ ಶಿಕ್ಷಣವಂತರಾಗುವಂತೆ ಮಾಡಿದರು ಎಂದು ತಿಳಿಸಿದರು.
ಶೋಷಿತ ವರ್ಗದ ಇಂದಿನ ಯುವ ಜನತೆ ಜ್ಯೋತಿ ಬಾಪುಲೆ ಅವರಿಂದ ಪ್ರೇರಿತರಾಗಬೇಕು, ಅಸಮಾನತೆ ವಿರುದ್ದ ಹೋರಾಟ ನಡೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ ಬ್ರಿಟಿಷ್ ಸರ್ಕಾರದಿಂದ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಎಂಬ ಬಿರುದಿಗೆ ಪಾತ್ರರಾದವರು ಜ್ಯೋತಿ ಬಾಪುಲೆ ಎಂದರು.

ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು, ಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಪುಷ್ಪಾ, ಚಂದ್ರಕಲಾ, ಕೆ.ಎಸ್.ಮಂಜುಳಾ, ಸುಕನ್ಯಾ, ನಗರ ಸಮಿತಿ ಖಜಾಂಚಿ ನವೀನ್ ಉಪಸ್ಥಿತರಿದ್ದರು.

ಉಪನ್ಯಾಸಕ ಸುರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ಪಕ್ಷದ ಕಾರ್ಯದರ್ಶಿ ವಸಂತ್ ಸ್ವಾಗತಿಸಿದರು, ರೇಖಾ ವಂದಿಸಿದರು.