ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು : ಹೆಚ್.ಹೆಚ್.ದೇವರಾಜ್.

106
firstsuddi

ಚಿಕ್ಕಮಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಹೇಳಿದ್ದಾರೆ.

ಡಿ.ಕೆ.ತಾರಾದೇವಿ ಅವರ ನಂತರ 30 ವರ್ಷಗಳ ಮೇಲೆ ಜಿಲ್ಲೆಗೆ ಕೇಂದ್ರ ಸಚಿವ ಸ್ಥಾನ ದೊರೆತಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಸಾಕಷ್ಟು ನಿರೀಕ್ಷೆ ಇದೆ ಅದನ್ನು ಶೋಭಾ ಕರಂದ್ಲಾಜೆ ಅವರು ಯಾವುದೇ ಕಾರಣಕ್ಕೂ ಹುಸಿಗೊಳಿಸಬಾರದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎರಡು ಬಾರಿ ಜಿಲ್ಲೆಯ ಸಂಸದರಾದರೂ ಜಿಲ್ಲೆಯಲ್ಲಿ ಜನ ಗುರುತಿಸುವಂತಹ ಜನಪರ ವಾದಂತಹ ಯಾವುದೇ ಕೆಲಸವನ್ನು ಶೋಭಾ ಅವರು ಮಾಡಿಲ್ಲ. ಯಾವುದೇ ಯೋಜನೆಯನ್ನು ತರುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದಿರುವ ದೇವರಾಜ್ ಈಗಲಾದರೂ ಸಮಗ್ರ ಅಭಿವೃಧ್ದಿಗೆ ಮುಂದಾಗಬೇಕು ಎಂದು ಸಲಹೆ ಮಾಡಿದ್ದಾರೆ.

ಜಿಲ್ಲೆಯ ಜಲ್ವಂತ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಾಫಿ ಬೆಳೆಗಾರರಿಗೆ ತೂಗುಗತ್ತಿಯಾಗಿರುವ ಸರ್ಫೇಸಿ ಕಾಯ್ದೆಯನ್ನು ತಮ್ಮ ಅಧಿಕಾರ ಬಳಸಿ ರದ್ದುಗೊಳಿಸಬೇಕು. ಜಿಲ್ಲೆಯ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಯ ಸಮಸ್ಯೆಯನ್ನು ನಿವಾರಿಸಬೇಕು. ನಿರುದ್ಯೋಗ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಯೋಜನೆಗಳನ್ನು ತರಬೇಕು. ನೀರಾವರಿ, ಕೃಷಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದ್ದಾರೆ.