ಚಿಕ್ಕಮಗಳೂರು : ಶೋಷಿತ ವರ್ಗದವರಿಗೆ ಗೌರವಯುತವಾದ ಬದುಕನ್ನು ಕಟ್ಟಿಕೊಟ್ಟವರು ಕವಿ ಡಾ| ಸಿದ್ಧಲಿಂಗಯ್ಯನವರು : ಕೆ.ಟಿ.ರಾಧಾಕೃಷ್ಣ.

167
firstsuddi

ಚಿಕ್ಕಮಗಳೂರು : ದೌರ್ಜನ್ಯ, ದಬ್ಬಾಳಕೆ, ಶೋಷಣೆಗಳಿಂದ ತುಳಿತಕ್ಕೊಳಗಾಗಿ ನಲುಗಿ ಹೋಗಿದ್ದ ಶೋಷಿತ ವರ್ಗದವರಿಗೆ ಗೌರವಯುತವಾದ ಬದುಕನ್ನು ಕಟ್ಟಿಕೊಟ್ಟವರು ಕವಿ ಡಾ|ಸಿದ್ಧಲಿಂಗಯ್ಯನವರು ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ನಗರದ ಬಿಎಸ್‍ಪಿ ಕಚೇರಿಯಲ್ಲಿ ನಿನ್ನೆ ಆಯೋಜಿಸಿದ್ದ ನಾಡಿನ ಹಿರಿಯ ಕವಿ ಡಾ|ಸಿದ್ಧಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

70ರ ದಶಕಕ್ಕೂ ಮುಂಚೆ ದಲಿತರ ಬಾಳು ಅಸಹನೀಯವಾಗಿತ್ತು. ಸಮಾಜದ ದಬ್ಬಾಳಿಕೆ, ದೌರ್ಜನ್ಯ, ಶೋಷಣೆಗಳಿಂದ ತುಳಿತಕ್ಕೊಳಗಾಗಿ ಆ ವರ್ಗದ ಜನ ಕಂಗೆಟ್ಟಿದ್ದರು. ಇಂತಹ ದಯನೀಯ ಸ್ಥಿತಿಯಲ್ಲಿದ್ದ ಶೋಷಿತರಿಗೆ ಸಿದ್ಧಲಿಂಗಯ್ಯನವರು ಹೋರಾಟದ ಹಾದಿಯನ್ನು ತೋರಿಸುವ ಮೂಲಕ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆದುಕೊಳ್ಳು ವಂತೆ ಪ್ರೇರೆಪಿಸಿದರು ಎಂದರು.

ತಮ್ಮ ಸಾಹಿತ್ಯದ ಮೂಲಕ ಶೋಷಿತ ಸಮುದಾಯವನ್ನು ಬಡಿದ್ದೆಬ್ಬಿಸಿದ ಸಿದ್ಧಲಿಂಗಯ್ಯನವರ ಆದರ್ಶಗಳನ್ನು ಇಂದಿನ ಶೋಷಿತ ವರ್ಗದ ಜನ ಮೈಗೂಡಿಸಿಕೊಳ್ಳಬೇಕು. ಅವರ ಹೋರಾಟದ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ ಮಾತನಾಡಿ, ಶೋಷಿತರ ಏಳಿಗೆಗಾಗಿ ತಮ್ಮ ಬದುಕಿನ ಕೊನೆಯವರೆಗೂ ದುಡಿದ ಕವಿ ಸಿದ್ಧಲಿಂಗಯ್ಯನವರ ಸಿದ್ಧಾಂತಗಳನ್ನು ದಲಿತ ವರ್ಗ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕವಿ ಡಾ|ಸಿದ್ಧಲಿಂಗಯ್ಯನವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಚಾರಣೆ ಮಾಡಲಾಯಿತು, ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪನಮನ ಸಲ್ಲಿಸಲಾಯಿತು.

ಬಿಎಸ್‍ಪಿ ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ನಗರ ಖಜಾಂಚಿ ಎ.ಪಿ.ಸುರೇಶ್, ರವಿಕುಮಾರ್, ಧನಂಜಯ, ವಿನೀತ್, ಪುಷ್ಪಾ, ಕೆ.ಎಸ್.ಮಂಜುಳಾ ಉಪಸ್ಥಿತರಿದ್ದರು.