ನವದೆಹಲಿ : ಚೀನಾ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ವಿಪರೀತ ಏರಿಕೆ ಕಾಣುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ ಪಾಸಿಟಿವ್ ಪ್ರಕರಣಗಳ ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
ಕೇಂದ್ರ ಅರೋಗ್ಯ ಸಚಿವ ಮನ್ ಸುಖ್ ಮಾಂಡವೀಯಾ ಅವರು ದೇಶದ ಕೊವಿಡ್ ಸ್ಥಿತಿಗತಿಯ ಪರಿಶೀಲನಾ ಸಭೆಯನ್ನು ಕರೆದಿದ್ದಾರೆ. ಈ ಸಂಬಂಧ ಭಾರತದ ಎಲ್ಲ ರಾಜ್ಯಗಳ ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಬೇಕು ಎಂದು ಸೂಚಿಸಿದ್ದಾರೆ.
ಪ್ರಸ್ತುತ ಚೀನಾ ಜೊತೆಗೆ ಜಪಾನ್, ಅಮೆರಿಕ, ಕೊರಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿಯೂ ಕೊರೊನಾ ಸೋಂಕು ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಬಗ್ಗೆ ಭಾರತ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವು ಮಹತ್ವ ಪಡೆದಿದೆ.
ಜೀನೋಮ್ ಸೀಕ್ವೆನ್ಸಿಂಗ್ ಪ್ರಮಾಣವು ಹೆಚ್ಚಾದರೆ ಮಾತ್ರ ದೇಶದಲ್ಲಿ ಹರಡುತ್ತಿರುವ ಹೊಸ ರೂಪಾಂತರಿಗಳನ್ನು ಪತ್ತೆ ಮಾಡಲು ಹಾಗೂ ಸಮುದಾಯ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಕೊವಿಡ್ ತಪಾಸಣೆಯನ್ನು ಹೆಚ್ಚಿಸಬೇಕು. ಪಾಸಿಟಿವ್ ಬಂದ ಎಲ್ಲ ಮಾದರಿಗಳನ್ನೂ ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಇನ್ಸಾಕಾಗ್ ಪ್ರಯೋಗಾಲಯಗಳಿಗೆ (lGSLs – INSACOG Genome Sequencing Laboratories) ಕಡ್ಡಾಯವಾಗಿ ಕಳುಹಿಸಿಕೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.










