ಸ್ಯಾಂಡಲ್‍ವುಡ್ ನಟ ಸತೀಶ್ ನೀನಾಸಂ ಅವರನ್ನು ಮಂಡ್ಯ ಜಿಲ್ಲಾ ಮತದಾನ ಜಾಗೃತಿ ರಾಯಭಾರಿಯನ್ನಾಗಿ ಚುನಾವಣಾ ಆಯೋಗ ನೇಮಿಸಿದೆ.
ನಿನ್ನೆ ಮಂಡ್ಯದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸತೀಶ್, ಜಾತಿ, ಮತ, ಕುಲ ಯಾವುದನ್ನೂ ಲೆಕ್ಕಿಸದೇ, ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕ ವ್ಯಕ್ತಿಗಳಿಗೆ ಮತದಾನ ಮಾಡಿ, ಮತದಾನ ಅಮೂಲ್ಯವಾದದ್ದು ಅದನ್ನು ಮಾರಿಕೊಳ್ಳಬೇಡಿ ಮತ್ತು ಹಾಳು ಮಾಡಬೇಡಿ. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗಿಯಾಗಿ. ನಾನ್ಯಾಕೆ ಮತದಾನ ಮಾಡಬೇಕು ಎಂದು ಆಲೋಚಿಸುವ ಬದಲು, ಮತದಾನ ಮಾಡಿದರೆ ಎಂತಹ ರಾಷ್ಟ್ರವನ್ನು ಕಟ್ಟಬಹುದು ಎನ್ನುವುದರತ್ತ ಯೋಚಿಸಿ. ರಾಜ್ಯದಲ್ಲೇ ಮಂಡ್ಯದಲ್ಲಿ ಅತೀ ಹೆಚ್ಚು ಮತದಾನ ಆಗುವಂತೆ ಮಾಡಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಸತೀಶ್ ಹೇಳಿದರು.
ಮತದಾನದ ಕುರಿತಾಗಿ ಸತೀಶ್ ಯಾವಾಗಲೂ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಈ ಬಾರಿ ಚುನಾವಣೆಯ ರಾಯಭಾರಿ ಆಗಿದ್ದರಿಂದ ಮತ್ತಷ್ಟು ಜವಾಬ್ದಾರಿ ತಗೆದುಕೊಂಡು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಅಶೋಕ ಬ್ಲೇಡ್, ಮ್ಯಾಟ್ನಿ ಸಿನಿಮಾದ ಶೂಟಿಂಗ್ ನಲ್ಲಿ ಸತೀಶ್ ಬ್ಯುಸಿಯಾಗಿದ್ದಾರೆ.










