ಹುಬ್ಬಳ್ಳಿ : ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿರುವುದು ಅವರ ಹುಚ್ಚುತನ. ಸಿದ್ದರಾಮಯ್ಯ ಒಬ್ಬ ಮಾನಸಿಕ ಅಸ್ವಸ್ಥ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪುನಃ ಮೈತ್ರಿ ಆಗುತ್ತದೆ ಅಂದರೆ ಅದು ನಗೆಪಾಟಲಿಕೆ. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿಯಿಂದ ಎಷ್ಟು ಕಷ್ಟ ಅನುಭವಿಸಿದ್ದಾರೆ ಎಂದು ಅವರೇ ಹೇಳಿದ್ದಾರೆ. ಮೈತ್ರಿ ಸರ್ಕಾರ ಪತನವಾಗಲು ಕಾರಣ ಸಿದ್ದರಾಮಯ್ಯ. ಲೋಕಸಭ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ದಾಟಲು ಆಗುವುದಿಲ್ಲ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಕೇವಲ ಒಂದೊಂದು ಸ್ಥಾನವನ್ನು ಪಡೆದುಕೊಂಡವು. ಎರಡೂ ಪಕ್ಷಕ್ಕೂ ರಾಜ್ಯದ ಜನತೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ಉಪಚುನಾವಣೆಯಲ್ಲಿ ನಾವು 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಉಪಚುನಾವಣೆಯ ಬಳಿಕ ರಾಜ್ಯದ ಮುಖ್ಯಮಂತ್ರಿ ನಾನೇ ಎಂದು ಸಿದ್ದರಾಮಯ್ಯ ಅವರು ಹಗಲು ಗನಸು ಕಾಣುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಗೆಲ್ಲದೇ ಇದ್ದರೆ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಅವರು ಸವಾಲ್ ಹಾಕುತ್ತಿದ್ದಾರೆ. ಆದರೆ ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ, ಬಿಜೆಪಿ 8 ಸ್ಥಾನಗಳಲ್ಲಿ ಗೆಲ್ಲದೇ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆ. ಒಂದು ವೇಳೆ ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲ್ಲದೇ ಇದ್ದರೆ ನೀವು ನಿಮ್ಮ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಅವರೊಬ್ಬ ಹುಚ್ಚ ಎಂದು ನಾನು ಹೇಳಿದರೆ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಆದರೂ ಪರವಾಗಿಲ್ಲ ನಾನು ಹೇಳುತ್ತೇನೆ ಸಿದ್ದರಾಮಯ್ಯ ಒಬ್ಬ ಮಾನಸಿಕ ಅಸ್ವಸ್ಥ ಎಂದರು.
ಸಿದ್ದರಾಮಯ್ಯ ಅವರು ನಾನು ಕುರುಬ ನಾಯಕ ಎಂದು ಹೇಳುತ್ತಾರೆ, ಯಾವ ಕುರುಬನನನ್ನು ಬೆಳೆಯಲು ಬಿಟ್ಟಿದ್ದಾರೆ? ಅವರು ಕುರುಬರನ್ನು ಹಾಗೂ ದಲಿತರನ್ನು ಬೆಳೆಯಲು ಬಿಟ್ಟಿಲ್ಲ. ಸಿದ್ದರಾಮಯ್ಯ ಒಬ್ಬ ಸ್ವಾರ್ಥಿ,ತಾನೋಬ್ಬನೇ ಬೆಳೆಯಬೇಕೆ ಹೊರತು ಬೇರೆ ಯಾರೂ ಬೆಳೆಯಬಾರದು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ನ್ನು ಛಿದ್ರ ಛಿದ್ರ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.










