ಮೈಸೂರು: ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯನವರು ಜನರು ರಾಮ ಮಂದಿರಕ್ಕೆ ದೇಣಿಗೆ ನೀಡುತ್ತಿದ್ದಾರೆಯೇ ಹೊರತು ಬಿಜೆಪಿಗೆ ಅಲ್ಲ. ಸಾರ್ವಜನಿಕರ ಹಣ ದೇಣಿಗೆ ಪಡೆದ ಮೇಲೆ ಲೆಕ್ಕ ಕೇಳುವ ಹಕ್ಕು ನಮಗೂ ಇರುತ್ತದೆ. ಈ ಹಿಂದೆ ದೇಣಿಗೆ ಸಂಗ್ರಹಿಸಿದ ಲೆಕ್ಕ ಕೊಟ್ಟಿಲ್ಲ, ಆದರೆ ಈ ಬಾರಿ ಲೆಕ್ಕವನ್ನು ಕೊಡಲೇಬೇಕು. ಸಾರ್ವಜನಿಕ ಹಣವಾಗಿದ್ದರಿಂದ ಲೆಕ್ಕ ಕೇಳುತ್ತಿದ್ದೇವೆ ಎಂದರು.
ನಾನು ಸಹ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ. ಗ್ರಾಮದ ಜನರು ವಂತಿಗೆ ನೀಡುತ್ತಿದ್ದಾರೆ. ಇದರಲ್ಲಿ ಏನು ವಿಶೇಷ ಇದೆ. ಇದು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು. ನಾನು ಈ ದೇಶದ ಪ್ರಜೆ, ಲೆಕ್ಕ ಕೇಳೋ ಅಧಿಕಾರ ನನಗೂ ಇದೆ. ಲೆಕ್ಕ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದರೆ ಅದರ ಅರ್ಥ ಹಣ ದುರುಪಯೋಗವಾಗುತ್ತಿದೆ. ಈ ಹಿಂದೆಯೂ ಇವರು ದೇಣಿಗೆ ಸಂಗ್ರಹಿಸಿ ಲೆಕ್ಕ ಕೊಟ್ಟಿಲ್ಲ. ಆದರೆ ಈ ಬಾರಿ ಲೆಕ್ಕವನ್ನು ಕೊಡಲೇಬೇಕು ಎಂದು ಕಿಡಿಕಾರಿದ್ದಾರೆ.










