ಮಂಡ್ಯ : ಜಮೀನು ವಿಚಾರಕ್ಕಾಗಿ ಅಣ್ಣನನ್ನೇ ಚಾಕುವಿನಿಂದ ಇರಿದು ತಮ್ಮ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಬಾಲಕೃಷ್ಣ (54) ಹತ್ಯೆಯಾದ ವ್ಯಕ್ತಿ. ಸುರೇಶ್ ಮತ್ತು ಬಾಲಕೃಷ್ಣ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಯಾವಾಗಲೂ ಜಗಳ ನಡೆಯುತ್ತಿತ್ತು. ಆದರೆ ನಿನ್ನೆ ಜಗಳ ವಿಕೋಪಕ್ಕೆ ತಿರುಗಿ ತಮ್ಮನೇ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಾಲಕೃಷ್ಣ ಪತ್ನಿ ಸರಳ ಜಗಳ ಬಿಡಿಸಲು ಹೋದಾಗ ಆಕೆಗೂ ಸುರೇಶ್ ಚಾಕುವಿನಿಂದ ಇರಿದಿದ್ದಾನೆ.
ಚಾಕು ಇರಿತದಿಂದ ಗಾಯಗೊಂಡ ಬಾಲಕೃಷ್ಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಗಂಭೀರವಾಗಿ ಗಾಯಗೊಂಡ ಸರಳ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.










