ನ್ಯೂಯಾರ್ಕ್(ಅಮೆರಿಕ): ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅವು ಯಾವಾಗಲೂ ಅವಿಭಾಜ್ಯ ಅಂಗವಾಗಿಯೇ ಇರಲಿವೆ. ಪಾಕಿಸ್ತಾನ ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗಗಳೂ ಕೂಡ ಭಾರತದ್ದೇ ಆಗಿದೆ. ಹೀಗೆ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳಿಂದ ಕೂಡಲೇ ಪಾಕಿಸ್ತಾನ ಜಾಗ ಖಾಲಿ ಮಾಡಬೇಕು ಎಂದು ಭಾರತ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿನ್ನೆ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಜಮ್ಮು-ಕಾಶ್ಮೀರವನ್ನು ಪ್ರಸ್ತಾಪಿಸಿದ್ದರು. ಆಗಸ್ಟ್ 5 2019 ರಂದು ಭಾರತ ಸರ್ಕಾರ ಅಲ್ಲಿನ ವಿಶೇಷ ಸ್ಥಾನಮಾನ ತೆಗೆದು, ಜಮ್ಮು-ಕಾಶ್ಮೀರ ಮತ್ತು ಲಡಾಖ್ ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದ್ದರ ಬಗ್ಗೆ ಮಾತನಾಡಿದ್ದರು. ಕಾಶ್ಮೀರ ಪ್ರತ್ಯೇಕತಾವಾದಿ ಸೈಯದ್ ಅಲಿ ಗೀಲಾನಿಯವರ ಸಾವಿನ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿರುವ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಅವರು, ಭಯೋತ್ಪಾದಕರನ್ನು ಸಕ್ರಿಯವಾಗಿ ಬೆಂಬಲಿಸುವ ಇತಿಹಾಸವನ್ನು ಇಸ್ಲಾಮಾಬಾದ್ ಹೊಂದಿದೆ. ಪಾಕಿಸ್ತಾನದ ನಾಯಕರು ನಮ್ಮ ದೇಶದ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರ ಮಾಡುವ ಮೂಲಕ ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ತನ್ನ ದೇಶದ ಕಷ್ಟದ ಸ್ಥಿತಿಯ ಬಗ್ಗೆ ವಿಶ್ವದ ಗಮನವನ್ನು ಬೇರೆಡೆಗೆ ತಿರುಗಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ ಎಂದರು.










