ಜೆರುಸಲೇಂನಲ್ಲಿ ಭೀಕರ ಗುಂಡಿನ ದಾಳಿಗೆ ಏಳು ಮಂದಿ ಬಲಿ…

37
firstsuddi

ಜೆರುಸಲೇಂ: ಇಸ್ರೇಲ್ ಜೆರುಸಲೇಂನ ಹೊರವಲಯದಲ್ಲಿರುವ ಸಿನಗಾಗ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ.

ನೆವ್ ಯಾಕೋವ್ ಸ್ಟ್ರೀಟ್ ನಲ್ಲಿರುವ ಸಿನಗಾಗ್ ಬಳಿ ಸ್ಥಳೀಯ ಕಾಲಮಾನದಲ್ಲಿ ರಾತ್ರಿ 8:30ಕ್ಕೆ (ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ 12ಕ್ಕೆ) ಬಂದೂಕಿನಿಂದ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರೆ, 10 ಮಂದಿ ಗಾಯಗೊಂಡಿದ್ದಾರೆ. ಇವರ ಪೈಕಿ 14 ವರ್ಷದ ಒಬ್ಬ ಬಾಲಕ ಮತ್ತು 70 ವರ್ಷದ ವಯೋವೃದ್ಧರೊಬ್ಬರೂ ಸೇರಿದ್ದಾರೆ. ದಾಳಿ ನಡೆದ ತಕ್ಷಣ ವೈದ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ, ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ್ದಾರೆ. ಬಂಧೂಕುದಾರಿಯನ್ನು ಇಸ್ರೇಲ್ ಪಡೆಗಳು ಹೊಡೆದುರುಳಿಸಿವೆ.

ಜೆರುಸಲೇಂ ಸಿನಗಾಗ್ ನಲ್ಲಿ ದಾಳಿ ನಡೆಸಿದ ದುಷ್ಕರ್ಮಿ ಯಾರು, ಯಾವ ಸಂಘಟನೆಗೆ ಸೇರಿದವ ಎಂಬ ಸ್ಪಷ್ಟ ಮಾಹಿತಿ ಸದ್ಯ ಲಭ್ಯವಾಗಿಲ್ಲ. ಪ್ಯಾಲೆಸ್ಟೀನ್ ಪ್ರತ್ಯೇಕತೆಗೆ ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಸೇರಿದ ಉಗ್ರ ಇರಬಹುದು ಎಂಬ ಶಂಕೆ ಇದೆ.

ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುರುವಾರ ಈ ನಡೆಸಿದ ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನ ನಡುವೆ ದಶಕಗಳಿಂದಲೂ ಸಂಘರ್ಷದ ಸ್ಥಿತಿ ಇದೆ. ಇತ್ತೀಚೆಗೆ ಮರು ಆಯ್ಕೆಗೊಂಡಿರುವ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಇದು ಅಗ್ನಿಪರೀಕ್ಷೆಯಾಗಿದೆ.