ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್‌, ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು…

52
firstsuddi

ನವದೆಹಲಿ: ಜೈಲಿನಲ್ಲಿದ್ದ ಗ್ಯಾಂಗ್‌ಸ್ಟರ್‌, ರಾಜಕಾರಣಿ ಮುಖ್ತಾರ್ ಅನ್ಸಾರಿ ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಮೌದಿಂದ ಐದು ಬಾರಿ ಗೆದ್ದು ಶಾಸಕರಾಗಿದ್ದ ಅವರು 2005 ರಿಂದ ರಾಜ್ಯ ಮತ್ತು ಪಂಜಾಬ್‌ನಲ್ಲಿ ಜೈಲಿನಲ್ಲಿದ್ದರು. ಯುಪಿಯ ಬಂಡಾದಲ್ಲಿರುವ ಜೈಲಿನಲ್ಲಿದ್ದ 63 ವರ್ಷದ ಅನ್ಸಾರಿಯನ್ನು ವಾಂತಿ-ಭೇದಿ ಸಮಸ್ಯೆಯಿಂದಾಗಿ ಗುರುವಾರ ರಾತ್ರಿ 8:25 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅನ್ಸಾರಿಯನ್ನು ಜೈಲು ಅಧಿಕಾರಿಗಳು ಜಿಲ್ಲೆಯ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದರು. ರೋಗಿಗೆ ಒಂಬತ್ತು ವೈದ್ಯರ ತಂಡವು ತಕ್ಷಣದ ವೈದ್ಯಕೀಯ ಆರೈಕೆ ಒದಗಿಸಿತು. ಆದರೆ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ರೋಗಿಯು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

8 ಪ್ರಕರಣಗಳಲ್ಲಿ ಮುಖ್ತಾರ್ ಅನ್ಸಾರಿ ಶಿಕ್ಷೆ ಅನುಭವಿಸುತ್ತಿದ್ದರು. ಮುಖ್ತಾರ್ ಅವರ ನಿಧನದ ಬಳಿಕ ಘಾಜಿಪುರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಜೊತೆಗೆ ಇತರೆ ಸೂಕ್ಷ್ಮ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಆದೇಶಿಸಲಾಗಿದೆ.

ಮಂಗಳವಾರ ಮುಂಜಾನೆ ಅನ್ಸಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 14 ಗಂಟೆಗಳ ಚಿಕಿತ್ಸೆ ನಂತರ ಅವರನ್ನು ಅದೇ ದಿನ ಜೈಲಿಗೆ ಕಳುಹಿಸಿದ್ದರು. ಬುಧವಾರ ಜೈಲಿನಲ್ಲಿ ಅವರ ಆರೋಗ್ಯ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ಸಹಜವಾಗಿತ್ತು. ಆದರೆ ಇದೀಗ ನಿಧನ ಹೊಂದಿದ್ದಾರೆ.

ಇತ್ತೀಚೆಗೆ ಜೈಲಿನಲ್ಲಿ ತನ್ನನ್ನು ಕೊಲೆ ಮಾಡಲು ಯತ್ನಿಸಲಾಗುತ್ತಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಆರೋಪಿಸಿದ್ದರು. ಆಹಾರದಲ್ಲಿ ಸ್ಲೋ ಪಾಯ್ಸನ್ ನೀಡಲಾಗುತ್ತಿದ್ದು, ಇದರಿಂದ ಆರೋಗ್ಯ ಹದಗೆಡುತ್ತಿದೆ ಎಂದು ಹೇಳಿದ್ದರು. ಸಂಸದ ಎಂಎಲ್ಎ ಕೋರ್ಟ್ ಕೂಡ ಈ ವಿಚಾರದಲ್ಲಿ ಜೈಲು ಆಡಳಿತದಿಂದ ವರದಿ ಕೇಳಿತ್ತು.

ಮುಖ್ತಾರ್ ಅನ್ಸಾರಿ ಅವರು ಎರಡು ಬಾರಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಸೇರಿದಂತೆ ಐದು ಬಾರಿ ಮೌ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಕೊನೆಯ ಬಾರಿಗೆ 2017 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಇದಕ್ಕೂ ಮುನ್ನ ಮಾರ್ಚ್ 13 ರಂದು, 1990 ರಲ್ಲಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ ಪ್ರಕರಣದಲ್ಲಿ ಅನ್ಸಾರಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇದು ಎಂಟನೇ ಪ್ರಕರಣವಾಗಿದ್ದು, ಐದು ಬಾರಿ ಶಾಸಕರಾಗಿದ್ದ ನ್ಯಾಯಾಲಯದಿಂದ ದೋಷಿ ಮತ್ತು ಶಿಕ್ಷೆಗೆ ಗುರಿಯಾಗಿದ್ದಾರೆ.

ಮುಖ್ತಾರ್ ಅನ್ಸಾರಿ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳಿದ್ದು, ಅದರಲ್ಲಿ 15 ಕೊಲೆ ಆರೋಪದ ಕೇಸ್‌ಗಳಿವೆ. 1980 ರ ದಶಕದಲ್ಲಿ ಗ್ಯಾಂಗ್‌ವೊಂದನ್ನು ಸೇರಿದ್ದ. ನಂತರ 1990ರ ದಶಕದಲ್ಲಿ ತನ್ನದೇ ಆದ ಗುಂಪನ್ನು ರಚಿಸಿದ್ದ. ಮೌ, ಘಾಜಿಪುರ, ವಾರಣಾಸಿ ಮತ್ತು ಜೌನ್‌ಪುರ ಜಿಲ್ಲೆಗಳಲ್ಲಿ ಈ ತಂಡ ಸುಲಿಗೆ ಮತ್ತು ಅಪಹರಣದಲ್ಲಿ ತೊಡಗಿತ್ತು.