ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ದಾಳಿಯ ಸಂಚುಕೋರ ಅರೆಸ್ಟ್…

45
firstsuddi

ನವದೆಹಲಿ: ನಗರದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 3 ರಾಜ್ಯಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ ಬಳಿಕ ಮುಝಮ್ಮಿಲ್ ಶರೀಫ್ ಎಂಬಾತನನ್ನು ಎನ್ಐಎ ಬಂಧಿಸಿದೆ.

ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್ಐಎ ತಂಡಗಳು ಭೇದಿಸಿದ ನಂತರ ದಾಳಿಯ ಸಂಚುಕೋರ ಮುಝಮ್ಮಿಲ್ ಶರೀಫ್‌ನನ್ನು ಬಂಧಿಸಿದೆ. ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್ ಮತ್ತು ಸಂಚುಕೋರ ಅಬ್ದುಲ್ ಮಥೀನ್‌ನನ್ನು ತನಿಖೆಯಿಂದ ಪತ್ತೆ ಹಚ್ಚಲಾಗಿತ್ತು. ಎನ್ಐಎಗೆ ಬೇಕಾಗಿರುವ ಈ ಆರೋಪಿಗಳು ಈಗ ಪರಾರಿಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಷರೀಫ್ ಲಾಜಿಸ್ಟಿಕ್ ಬೆಂಬಲವನ್ನು ನೀಡಿದ್ದ ಎಂದು ಈವರೆಗಿನ ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ. ಈ ಮೂವರು ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆಗಳು ಮತ್ತು ಅಂಗಡಿಗಳ ಮೇಲೆ ಇಂದು ದಾಳಿ ನಡೆಸಲಾಯಿತು. ತಪಾಸಣೆಯ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ, ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ.