ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್ ಬರೋಬ್ಬರಿ 593 ಕೋಟಿ ರೂ. ಆಸ್ತಿಗೆ ಒಡೆಯ!

36
firstsuddi

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಸುರೇಶ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಡಿಕೆ ಸುರೇಶ್, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಮನಗರದಲ್ಲಿ ಬೃಹತ್ ರ್ಯಾಲಿ ನಡೆಸಿದರು. ಬಳಿಕ ಡಿಕೆ ಸುರೇಶ್ ಅವರು ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದವಾರಿಕೆ ಸಲ್ಲಿಸಿದರು. ಇನ್ನು ನಾಮಪತ್ರ ಅಫಿಡೇವಿಟ್​ನಲ್ಲಿ ಅವರು ಬರೋಬ್ಬರಿ 593.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ 338 ಕೋಟಿ ರೂ. ಆಸ್ತಿ ಘೋಷಿಸಿದ್ದ ಡಿಕೆ ಸುರೇಶ್ ಅವರು ಈ ಬಾರಿ ಒಟ್ಟು 106.71 ಕೋಟಿ ರೂ. ಚರಾಸ್ತಿ, ಒಟ್ಟು 486.33 ಕೋಟಿ ರೂ. ಸ್ಥಿರಾಸ್ತಿ ಘೋಷಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಡಿ.ಕೆ.ಸುರೇಶ್ ಅವರ ಆಸ್ತಿಯಲ್ಲಿ ಸುಮಾರು 259.19 (75%) ಕೋಟಿ ರೂ.ನಷ್ಟು ಏರಿಕೆ ಕಂಡಿದೆ.

ತನ್ನ ಬಳಿ ಒಟ್ಟು 21,35,500 ರೂ. ಮೌಲ್ಯದ 1260 ಗ್ರಾಂ ಚಿನ್ನ ಮತ್ತು 2,10,000 ರೂ. ಮೌಲ್ಯದ 4886 ಗ್ರಾಂ ಬೆಳ್ಳಿ ಹೊಂದಿರುವುದಾಗಿ ಹೇಳಿದ್ದಾರೆ. ಒಟ್ಟು 32,75,50,472 ರೂ. ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದರೆ 210,47,68,159 ರೂ. ಮೌಲ್ಯದ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ಒಟ್ಟು 211,91,41,888 ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಡಿಕೆ ಸುರೇಶ್ ಹೊಂದಿದ್ದಾರೆ.

50.06 ಕೋಟಿ ರೂ. ಸಾಲ ಇರುವುದಾಗಿಯೂ ಡಿಕೆ ಸುರೇಶ್ ತಿಳಿಸಿದ್ದಾರೆ. 7.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

2019ರ ಮಾರ್ಚ್ ಅಂತ್ಯಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 1,12,17,630 ರೂ. 2020 ಹಣಕಾಸು ವರ್ಷದಲ್ಲಿ 3,71,38,390 ರೂ., 2021ರ ಹಣಕಾಸು ವರ್ಷದಲ್ಲಿ 32,51,35,700 ರೂ., 2022ರ ಹಣಕಾಸು ವರ್ಷದಲ್ಲಿ 2,29,82,360 ರೂ., 2023 ರ ಹಣಕಾಸು ವರ್ಷದಲ್ಲಿ 12,30,04,200 ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.

ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಎಂದು ಮಾಹಿತಿ ನೀಡಿರುವ ಸುರೇಶ್, ಪತ್ನಿ ಕಾಲಂ ಮುಂದೆ ವಿಚ್ಛೇದನವಾಗಿದೆ. ಹೀಗಾಗಿ ಸಂಬಂಧಿಸಿಲ್ಲವೆಂದು ಉಲ್ಲೇಖಿಸಿದ್ದಾರೆ. ಇನ್ನು ಓರ್ವ ಪುತ್ರನಿದ್ದು, ಆತನ ಹೆಸರು ಕೆಶಿನ್ ಸುರೇಶ್ ಎಂದು ನಾಮಪತ್ರದ ಅಫಿಡೇವಿಟ್​ನಲ್ಲಿ ನಮೂದಿಸಿದ್ದಾರೆ.