ಜ್ಞಾನವಾಪಿ ಮಸೀದಿ ಪ್ರಕರಣ : ನಾಳೆಗೆ ತೀರ್ಪು ಕಾಯ್ದಿರಿಸಿದ ವಾರಣಾಸಿ ಕೋರ್ಟ್.

59
firstsuddi

ಲಕ್ನೋ : ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ ವಾರಣಾಸಿಯ ಜಿಲ್ಲಾ ನ್ಯಾಯಾಲಯ ತೀರ್ಪನ್ನು ನಾಳೆಗೆ ಕಾಯ್ದಿರಿಸಿದೆ. ಈ ಸಂಬಂಧ ನಾಳೆ ಕೋರ್ಟ್ ಮಹತ್ವದ ಆದೇಶ ನೀಡಲಿದೆ.

ವಿಚಾರಣೆ ವೇಳೆ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಹಿಂದೂ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಮಸೀದಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು. 1991 ಕಾಯಿದೆ ಅನ್ವಯ ಈ ಅರ್ಜಿ ವಿಚಾರಣೆ ಅರ್ಹವಾಗಿಲ್ಲ, ಇದು ಆರ್ಡರ್ 7 ರೂಲ್ 11 ಉಲ್ಲಂಘನೆಯಾಗಿದೆ ಎಂದು ವಾದಿಸಿದರು. ಈ ನಿಯಮ ಉಲ್ಲಂಘಿಸಿ ನಡೆಸಿದ ಸರ್ವೆ ಕೂಡಾ ಅನೂರ್ಜಿತವಾಗಿದ್ದು ಮೊದಲು ಈ ಅರ್ಜಿ ವಿಚಾರಣೆಗೆ ಅರ್ಹವೇ? ಅಲ್ಲವೇ? ಎಂದು ತಿರ್ಮಾನವಾಗಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದರು.

ಇದಕ್ಕೆ ಪ್ರತಿವಾದ ಸಲ್ಲಿಸಿದ ಹಿಂದೂ ಪರ ವಕೀಲರು ಕಾನೂನು ಬದ್ಧವಾಗಿ ನಿರ್ಮಿಸಿದ ಧಾರ್ಮಿಕ ಕ್ಷೇತ್ರಗಳಿಗೆ ಮಾತ್ರ 1991 ಅನ್ವಯವಾಗಲಿದ್ದು ಅತಿಕ್ರಮಣ ಕಟ್ಟಡಗಳಿಗಲ್ಲ, ರಾಮ ಮಂದಿರ ಪ್ರಕರಣವನ್ನು ಇದೇ ಆಧಾರದ ಮೇಲೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ ಎಂದರು.

ವಾದ ಪ್ರತಿವಾದ ಆಲಿಸಿದ ಜಿಲ್ಲಾ ನ್ಯಾಯಾಲಯ ನಾಳೆ ಅರ್ಜಿ ವಿಚಾರಣೆಗೆ ಅರ್ಹವೇ ಎಂಬುದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲಿದೆ ಎಂದು ಹೇಳಿತು. ವಾರಣಾಸಿ ಕೋರ್ಟ್ ನಾಳೆ ನೀಡಲಿರುವ ಆದೇಶದ ಮೇರೆಗೆ ಪ್ರಕರಣದ ವಿಚಾರಣೆ ಹೇಗೆ ಮುಂದುವರಿಯಲಿದೆ ಎಂಬುದು ನಿರ್ಧಾರವಾಗಲಿದೆ.