ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ದೆಹಲಿಯಲ್ಲಿರುವ ಇಡಿ ವಿಶೇಷ ನ್ಯಾಯಾಲಯ ಮುಂದೆ ಹಾಜರಾಗಿದ್ದರು. ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಸೇರಿ ಐದು ಮಂದಿ ಆರೋಪಿಗಳಿಗೆ ಕೋರ್ಟ್ ಸಮನ್ಸ್ ನೀಡಿತ್ತು. ಸಮನ್ಸ್ ಹಿನ್ನೆಲೆ ಇಂದು ನ್ಯಾಯಾಧೀಶ ವಿಕಾಸ್ ದುಲ್ ಅವರ ಮುಂದೆ ಹಾಜರಾಗಿದ್ದರು.
ಪ್ರಕರಣದ ಮೊದಲ ಆರೋಪಿ ಡಿಕೆ ಶಿವಕುಮಾರ್ ಗೆ ಜಾಮೀನು ಸಿಕ್ಕಿದೆ. ಉಳಿದವರಿಗೆ ಜಾಮೀನು ಮಂಜೂರು ಮಾಡಿ ಎಂದು ಡಿಕೆ ಶಿವಕುಮಾರ್ ಪರ ವಕೀಲರು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಇಡಿ ವಕೀಲರು ಜಾಮೀನು ನವೀಕರಿಸಲು ವಿರೋಧ ವ್ಯಕ್ತಪಡಿಸಿದರು. ಡಿಕೆ ಶಿವಕುಮಾರ್ ಅವರಿಗೆ ಹಿಂದೆ ಜಾಮೀನು ನೀಡಿರುವುದು ದೆಹಲಿ ಹೈಕೋರ್ಟ್. ಇಡಿ ವಿಶೇಷ ನ್ಯಾಯಾಲಯದಲ್ಲಿ ಅಲ್ಲ. ಈ ನ್ಯಾಯಾಲಯ ಜಾಮೀನನ್ನು ನಿರಾಕರಿಸಬೇಕು ಎಂದು ತಮ್ಮ ವಾದ ಮಂಡಿಸಿದರು.
ಇಡಿ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆಶಿ ಪರ ವಕೀಲರು, ಇದೇ ಕೋರ್ಟ್ ಕಾರ್ತಿ ಚಿದಂಬರಂಗೆ ಜಾಮೀನು ನೀಡಿದೆ. ಹಾಗಾಗಿ ನಮ್ಮ ಕಕ್ಷಿದಾರರಿಗೂ ಜಾಮೀನು ನೀಡಬಹುದು ಎಂದು ಅರ್ಜಿ ಸಲ್ಲಿಕೆ ಮಾಡಿದರು. ಇತ್ತ ಜಾಮೀನು ಅರ್ಜಿಗೆ ಅಕ್ಷೇಪ ಸಲ್ಲಿಸಲು ಇಡಿ ವಕೀಲರು ಸಮಯಾವಕಾಶ ಬೇಕೆಂದು ನ್ಯಾಯಾಧೀಶರ ಬಳಿ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿತು.
ಏನಿದು ಪ್ರಕರಣ?
2018ರಲ್ಲಿ ದೆಹಲಿಯ ಸಪ್ಧರ್ ಜಂಗ್ ಫ್ಲಾಟ್ ನಲ್ಲಿ ಸಿಕ್ಕ ಹಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, 2019ರ ಸೆಪ್ಟೆಂಬರ್ 3ರಂದು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಡಿ.ಕೆ. ಶಿವಕುಮಾರ್ 45 ದಿನಗಳ ಕಾಲ ತಿಹಾರ್ ಕೇಂದ್ರ ಕಾರಾಗೃಹದಲ್ಲಿ ಇರಬೇಕಾಯಿತು. ಬಳಿಕ ಅವರಿಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಡಿ.ಕೆ. ಶಿವಕುಮಾರ್ 800 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಹೊಂದಿದ್ದಾರೆ. ಕುಟುಂಬದ ಸದಸ್ಯರ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಷ್ಟು ಹಣವನ್ನು ವಿವಿಧ ಬ್ಯಾಂಕ್ಗಳಲ್ಲಿ ಇಟ್ಟಿದ್ದಾರೆ. 20ಕ್ಕೂ ಹೆಚ್ಚು ಬ್ಯಾಂಕ್ ಗಳಲ್ಲಿ 317 ಖಾತೆಗಳು ಪತ್ತೆಯಾಗಿವೆ. ಅವರ ಪುತ್ರಿ ಐಶ್ವರ್ಯ ಹೆಸರಿನಲ್ಲಿ 108 ಕೋಟಿ ರೂಪಾಯಿಯಷ್ಟು ಅಕ್ರಮ ಹಣ ವರ್ಗಾವಣೆ ಆಗಿದೆ. ಡಿಕೆಶಿ ಪುತ್ರಿಗೆ 48 ಕೋಟಿ ಸಾಲ ಇದೆ. ಆದರೆ ಸಾಲದ ಮೂಲ ತಿಳಿಸಿಲ್ಲ ಎಂದು ಆರೋಪಿಸಲಾಗಿತ್ತು.










