ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿಸೆಂಬರ್ 29ರಿಂದ ಆಟೋ ಚಾಲಕರು ಆಟೋ ಸಂಚಾರ ಬಂದ್ ಮಾಡಲು ತೀರ್ಮಾನಿಸಿದ್ದಾರೆ.
ಸಾರಿಗೆ ಇಲಾಖೆ ರ‍್ಯಾಪಿಡೊ ಬೈಕ್, ಟ್ಯಾಕ್ಸಿ ಬ್ಯಾನ್ ಮಾಡಬೇಕು, ಬೌನ್ಸ್ ಎಲೆಕ್ಟ್ರಿಕ್ ಬೈಕ್ ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಡಿಸೆಂಬರ್ 29ರಂದು ಬೆಂಗಳೂರಿನಲ್ಲಿ ಆಟೋ ಸಂಚಾರ ಸ್ಥಗಿತವಾಗಲಿದೆ.
ಡಿಸೆಂಬರ್ 29ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ನಿಂದ ಬೃಹತ್ ಆಟೋ ಜಾಥಾ ಮೂಲಕ ವಿಧಾನಸೌಧ ಮುತ್ತಿಗೆ ಹಾಕಲು ಚಾಲಕರು ನಿರ್ಧರಿಸಿದ್ದಾರೆ. ರಾಜಧಾನಿಯ 2.10 ಲಕ್ಷ ಆಟೋ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿದ್ದು, 29ರಂದು ರಾಜಧಾನಿಯಲ್ಲಿ ಸಂಪೂರ್ಣ ಆಟೋ ಸಂಚಾರ ಸ್ತಬ್ಧವಾಗಲಿದೆ.
ಇತ್ತೀಚಿಗಷ್ಟೇ ಸಾರಿಗೆ ಇಲಾಖೆ ರಾಜ್ಯದಲ್ಲಿ ಕೆಲ ಖಾಸಗಿ ಕಂಪನಿಗಳ ಎಲೆಕ್ಟ್ರಿಕ್ ಬೈಕ್ , ಟ್ಯಾಕ್ಸಿಗೆ ಅವಕಾಶ ನೀಡಿತ್ತು. ಸದ್ಯ ಈ ವಿಚಾರ ಆಟೋ ಚಾಲಕರ ಕೆಂಗೆಣ್ಣಿಗೆ ಗುರಿಯಾಗಿದೆ. ಮೊದಲ ಹಂತದಲ್ಲಿ 100 ಎಲೆಕ್ಟ್ರಿಕ್ ಬೈಕ್ ಗಳನ್ನ ರಸ್ತೆಗಿಳಿಸಲು ನಿರ್ಧರಿಸಿರುವ ಬೌನ್ಸ್ ಕಂಪನಿ, ನಂತರ ಹಂತ-ಹಂತವಾಗಿ ಸಾವಿರ ಇ- ಬೈಕ್ ಗಳನ್ನ ರಸ್ತೆಗಿಳಿಸಲು ನಿರ್ಧಾರ ಮಾಡಿದೆ.
ಈ ಹಿಂದೆ ಬೌನ್ಸ್ ಕಂಪನಿ ಬೈಕ್ ಸೇವೆ ನೀಡುತ್ತಿತ್ತು. ಆದ್ರೆ ಕೊರೊನಾ ಸಮಯದಲ್ಲಿ ಬೈಕ್ ಸೇವೆಯನ್ನ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಇ-ಬೈಕ್ ಸೇವೆ ನೀಡಲು ಮುಂದಾಗಿರೋದು ಚಾಲಕರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಈಗಾಗಲೇ ಕೊರೊನಾ ಸಂಕಷ್ಟದಿಂದ ಬೇಸತ್ತಿರುವ ಚಾಲಕರಿಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ ಎಂದು ಸಾರಿಗೆ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.










