ಚಿಕ್ಕಬಳ್ಳಾಪುರ : ಬ್ಲಾಕ್ ಬೋರ್ಡ್ ಮೇಲೆ ಡೆತ್ ನೋಟ್ ಬರೆದಿಟ್ಟು ಶಿಕ್ಷಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ನಡೆದಿದೆ. ಚಂದ್ರಶೇಖರ(35) ಆತ್ಮಹತ್ಯೆಗೆ ಶರಣಾದ ಶಿಕ್ಷಕ ಎಂದು ಗುರುತಿಸಲಾಗಿದೆ. ಚಂದ್ರಶೇಖರ ಅವರು ಮಂಚೇನಹಳ್ಳಿಯ ಆಚಾರ್ಯ ಖಾಸಗಿ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಆಂಗ್ಲಭಾಷೆ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇದು ಅನುದಾನಿತ ಶಾಲೆಯಾಗಿದ್ದರೂ ಕೂಡಾ ಸರ್ಕಾರಿ ನೇಮಕಾತಿಗೆ ಅನುಮೋದನೆ ಮಾಡದೆ ಇದ್ದ ಕಾರಣ ಚಂದ್ರಶೇಖರ್ ಅವರು ಶಾಲೆಯ ಬ್ಲಾಕ್ ಬೋರ್ಡ್ ಮೇಲೆ ಖಾಸಗಿ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ. ನನ್ನ ಸೇವೆಯನ್ನು ಗುರುತಿಸಿ ಸರ್ಕಾರಿ ಶಿಕ್ಷಕನಾಗಿ ನನ್ನನ್ನು ಅನುಮೋದನೆ ಮಾಡಿಕೊಳ್ಳದ ಆಚಾರ್ಯ ಪ್ರೌಢಶಾಲೆ ಮಂಚೇನಹಳ್ಳಿ ಆಡಳಿತ ಮಂಡಳಿಯವರೆ ನನ್ನ ಈ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










