ಬೆಂಗಳೂರು : ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆಯ ಕುರಿತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಮಾಡಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ, ಬೆಂಗಳೂರಿನ ಟೌನ್ ಹಾಲ್ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕರ್ನಾಟಕದ ಗಡಿ ಭಾಗದಲ್ಲಿ ಎಂಇಎಸ್ ದುಷ್ಕರ್ಮಿಗಳು ಕನ್ನಡಿಗರನ್ನು ಪದೇ ಪದೇ ಕೆಣಕುತ್ತಲೇ ಇದ್ದು, ಈ ನಡುವೆ ರಾಜ್ಯ ಸರ್ಕಾರ ಮರಾಠಿಗರಿಗೆ ಪ್ರಾಧಿಕಾರ ರಚನೆ ಮಾಡಿರುವುದು ಕನ್ನಡಿಗರಿಗೆ ಹಾಗೂ ಕನ್ನಡ ನಾಡಿಗೆ ಅನ್ಯಾಯ ಆಗಿದೆ. ಇದರಿಂದಾಗಿ ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಇಂದು ಮುಂಜಾನೆ 6 ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ 6ರ ವರೆಗೆ ನಡೆಯಲಿದ್ದು, ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಬೆಂಗಳೂರಿನ ಕೆ.ಆರ್. ಪುರಂನ ಪೈ ಲೇಔಟ್ ನಲ್ಲಿ ಕಿಡಿಗೇಡಿಗಳೂ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಿದ್ದರೂ ಕೂಡಾ ಬ್ಯಾಂಕ್, ಸರ್ಕಾರಿ ಕಚೇರಿಗಳು, ಹೋಟೆಲ್, ಸಂಚಾರ ವ್ಯವಸ್ಥೆ, ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.










