ಮುಂಬೈ : ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ತೀರ್ಪು ಇಂದು ಹೊರಬೀಳಲಿದೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಎನ್‍ಸಿಬಿ ಬಲೆಗೆ ಬಿದ್ದಿರುವ ಆರ್ಯನ್ ಖಾನ್ ಜಾಮೀನು ಕುರಿತು ಅಕ್ಟೋಬರ್ 14 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ವಿ.ಪಾಟೀಲ್, ಆರ್ಯನ್ ಖಾನ್ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿ ಅಕ್ಟೋಬರ್ 20ಕ್ಕೆ ವಿಚಾರಣೆಯನ್ನು ಮುಂದೂಡಿದ್ದರು. ಹಾಗಾಗಿ ಇಂದು ಆರ್ಯನ್ ಖಾನ್ ಗೆ ಜಾಮೀನು ಸಿಗಬಹುದೇ ಅಥವಾ ಇನ್ನಷ್ಟು ದಿನ ಜೈಲುವಾಸ ಮುಂದುವರಿಯುವುದೇ ಎಂಬ ಕುತೂಹಲ ಮೂಡಿದೆ.
ಆರ್ಯನ್ ಖಾನ್ ಪರ ವಾದ ಏನು?
ಎನ್‍ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಮಾದಕ ವಸ್ತುಗಳು ಪತ್ತೆಯಾಗಿಲ್ಲ. ದಾಳಿ ವೇಳೆ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ ಮತ್ತು ಅವರ ಬಳಿಕ ಹಣವೂ ಇರಲಿಲ್ಲ, ಹೀಗಾಗಿ ಡ್ರಗ್ ಸೇವನೆ, ಮಾರಾಟ, ಖರೀದಿ ಆರೋಪಗಳೇಲ್ಲ ಸುಳ್ಳು ಎಂದು ವಾದಿಸಿದ್ದಾರೆ.
ಎನ್‍ಸಿಬಿ ಪರ ವಾದ ಏನು?
ಆರ್ಯನ್ ಖಾನ್ ನಿಯಮಿತವಾಗಿ ಡ್ರಗ್ ಸೇವನೆ ಮಾಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಮೂರು ವರ್ಷದಿಂದ ಮಾದಕ ವಸ್ತುಗಳ ಬಳಕೆ ಮಾಡುತ್ತಿದ್ದಾರೆ ಎಂದು ಅನಿಲ್ ಸಿಂಗ್ ಆರೋಪಿಸಿದ್ದಾರೆ. ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕು, ಯಾರನ್ನು ತನಿಖೆ ಒಳಪಡಿಸಬೇಕು ಅದು ತನಿಖಾಧಿಕಾರಿಯ ಹಕ್ಕು. ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.










