ಮುಂಬೈ : ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ಮುಂದೂಡಿಕೆಯಾಗಿದ್ದು, ಬುಧವಾರ ವಿಚಾರಣೆ ನಡೆಸುವುದಾಗಿ ಮುಂಬೈ ಸೆಷನ್ಸ್ ಕೋರ್ಟ್ ಹೇಳಿದೆ.
ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಸೆಷನ್ಸ್ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ವಾದ ಆರಂಭಿಸಿದ ಎನ್‍ಸಿಬಿ ಪರ ವಕೀಲರು, ತನಿಖಾ ವರದಿ ಸಲ್ಲಿಸಲು ಒಂದು ವಾರದ ಸಮಯ ಬೇಕು ಈ ಹಿನ್ನೆಲೆ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಆದರೆ ಎನ್‍ಸಿಬಿ ವಾದಕ್ಕೆ ಆರ್ಯನ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್ ದೇಸಾಯಿ ಮತ್ತು ವಕೀಲ ಸತೀಶ್ ಮನೇಶಿಂಧೆ ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ವಿಚಾರಣೆ ಆರಂಭಿಸಬೇಕು ಎಂದು ಮನವಿ ಮಾಡಿದರು.
ಆರ್ಯನ್ ಖಾನ್ ಪರ ವಕೀಲರ ಆಕ್ಷೇಪ ಹಿನ್ನೆಲೆ ಕನಿಷ್ಠ ಎರಡು ದಿನಗಳ ಕಾಲಾವಕಾಶ ಬೇಕು .ವಿಚಾರಣೆ ಗುರುವಾರ ನಡೆಸುವಂತೆ ಎನ್ಸಿಬಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಎಮ್ ಚಿಮಲ್ಕರ್ ಮನವಿ ಮಾಡಿದರು. ಬಳಿಕ ಮಧ್ಯಪ್ರವೇಶ ಮಾಡಿದ ನ್ಯಾಯಾಧೀಶರು ತನಿಖಾ ವರದಿ ಸಲ್ಲಿಸಲು ಎನ್‍ಸಿಬಿ ಕಾಲಾವಕಾಶ ಕೇಳಿದ ಹಿನ್ನೆಲೆ ಬುಧವಾರ ಮಧ್ಯಾಹ್ನ ಬಳಿಕ ವಿಚಾರಣೆ ನಡೆಸೋಣ ಎಂದು ಹೇಳಿದರು.










