ತಮಿಳುನಾಡಿನಲ್ಲಿ ಭಾರಿ ಮಳೆ, ಕರಾವಳಿಯಲ್ಲಿ ರೆಡ್ ಅಲರ್ಟ್, ಕರ್ನಾಟಕದಲ್ಲೂ ಮಳೆ ಸಾಧ್ಯತೆ.

51

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಫೆಂಗಲ್ ಚಂಡಮಾರುತ ತಮಿಳುನಾಡಿನತ್ತ ಧಾವಿಸಿದ್ದು, ಪರಿಣಾಮ ತಮಿಳುನಾಡು ಕರಾವಳಿಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ತಮಿಳುನಾಡು ಕರಾವಳಿಗೆ ಫೆಂಗಲ್ ಚಂಡಮಾರುತ ಅಪ್ಪಳಿಸಲಿದ್ದು, ತಮಿಳುನಾಡಿನಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಿಗೆ ಹವಾಮಾನ ಎಚ್ಚರಿಕೆ ನೀಡಿದ್ದು, ತಮಿಳುನಾಡು ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಭಾರೀ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇಂದು ಅಂದರೆ ನವೆಂಬರ್ 26 ರಂದು ಇತರ ಹಲವು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ. ನವೆಂಬರ್ 27 ರಂದು ತಮಿಳುನಾಡಿನ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆ ಮೂಲಗಳ ಪ್ರಕಾರ ನವೆಂಬರ್ 27 ರಂದು ಚಂಡಮಾರುತವಾಗಿ ತೀವ್ರಗೊಳ್ಳಲಿದ್ದು, ನಂತರ ಇದು ಉತ್ತರ-ವಾಯುವ್ಯದ ಕಡೆಗೆ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುತ್ತದೆ. ನಂತರದ 2 ದಿನಗಳಲ್ಲಿ ಶ್ರೀಲಂಕಾ ಕರಾವಳಿಯಲ್ಲೂ ಮಳೆಯಾಗಲಿದೆ. ನವೆಂಬರ್ 26 ಮತ್ತು 27 ರಂದು ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ.