ತಮಿಳುನಾಡಿನಲ್ಲಿ ವರುಣನ ಆರ್ಭಟ – ಮನೆ ಕುಸಿದು ಒಂಬತ್ತು ಮಂದಿ ಸಾವು…

69
firstsuddi

ಚೆನ್ನೈ : ತಮಿಳುನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮನೆ ಕುಸಿದಿದ್ದು, ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಕುಟುಂಬದವರು ಮನೆಯಲ್ಲಿ ಮಲಗಿದ್ದಾಗ ಹಠಾತ್ ಆಗಿ ಛಾವಣಿ ಕುಸಿದು ಈ ದುರಂತ ಸಂಭವಿಸಿದೆ. ಮೃತರನ್ನು ಅನೀಶಾ ಬೇಗಂ (63), ಕೌಸರ್ (45), ರೋಗಿ ನಾಸ್ (27), ತನ್ಸಿಲಾ (27), ಮಿಸ್ಬಾ ಫಾತಿಮಾ (22), ಮನುಲ್ಲಾ (8), ಅಫ್ರಾ (4), ಅಬಿರಾ (3) ಮತ್ತು ದಾಮೋದ್ (2) ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದು, ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೆರ್ನಂಬಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪೆರ್ನಂಬಟ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ.