ಗುಂಟೂರು : ತನ್ನ ತಾಯಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ಮರ್ಮಾಂಗವನ್ನೇ ಮಗಳು ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ತುಮ್ಮಲಪಾಲಂ ಮೂಲದ ರಾಮಚಂದ್ರ ರೆಡ್ಡಿ ಎರಡು ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯಲ್ಲಿ ನೆಲೆಸಿದ್ದರು. ಈ ವೇಳೆ ಐತಾನಗರದ ಮಹಿಳೆಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ.
ರಾಮಚಂದರೆಡ್ಡಿ ಅವರು ರೈಲ್ವೆ ನಿಲ್ದಾಣದ ಬಳಿಯ ಲಾಡ್ಜ್ ನಲ್ಲಿ ಉಳಿದುಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿ ಸಂಬಂಧ ಮುಂದುವರಿಸಿದ್ದರು. ಆದರೆ, ಮಹಿಳೆಯ ಮಗಳಿಗೆ ಈ ಸಂಬಂಧ ಇಷ್ಟವಾಗಿರಲಿಲ್ಲ. ಈ ವಿಚಾರವಾಗಿ ತಾಯಿಯೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು. ಆದರೂ ತಾಯಿ, ರಾಮಚಂದ್ರರೆಡ್ಡಿ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಳು.
ನಿನ್ನೆ ರಾತ್ರಿ ಮಹಿಳೆ ಹಾಗೂ ಆಕೆಯ ಗೆಳೆಯ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಮಹಿಳೆಯ ಮಗಳು ಬ್ಲೇಡ್ ನಿಂದ ರಾಮಚಂದ್ರ ರೆಡ್ಡಿಯ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ತೆನಾಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗುಂಟೂರು ಜಿಜಿಎಚ್ ಗೆ ಕರೆದೊಯ್ಯಲಾಗಿದೆ. ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.










