ದೆವ್ವಕ್ಕೆ ಹೆದರಿ ಜೀವ ಬಿಟ್ಟ ಪೊಲೀಸ್!

69
firstsuddi

ಚೆನ್ನೈ : ಪೊಲೀಸ್ ಕಾನ್ಸ್​ಟೆಬಲ್ ಒಬ್ಬರು ದೆವ್ವಕ್ಕೆ ಹೆದರಿ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.

ಪ್ರಭಾಕರನ್(33) ಮೃತ ವ್ಯಕ್ತಿ. ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್​ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ, ಪ್ರಭಾಕರನ್ ಅವರ ಕನಸಿನಲ್ಲಿ ಬೆಂಕಿಯಲ್ಲಿ ಸುಟ್ಟುಹೋದ ಮಹಿಳೆಯೊಬ್ಬರು ಬಂದು ಕತ್ತು ಹಿಸುಕಲು ಪ್ರಯತ್ನಿಸಿದ್ದಳು. ಈ ಬಗ್ಗೆ ಅವರು ತಮ್ಮ ಸ್ನೇಹಿತರು ಹಾಗೂ ಮನೆಯವರ ಬಳಿ ಹೇಳಿಕೊಂಡಿದ್ದರು. ಯಾಕೆ ತನಗೆ ಹೀಗೆ ಕನಸು ಬೀಳುತ್ತಿದೆ ಎಂಬ ಬಗ್ಗೆ ಪ್ರಭಾಕರನ್ ಜ್ಯೋತಿಷಿಯನ್ನು ಸಂಪರ್ಕಿಸಿದ್ದರು. ಅವರು ಇದು ಪ್ರೇತ ಅಥವಾ ಆತ್ಮದ ಕಾಟವಿರಬಹುದು ಎಂದಿದ್ದರು. ಹೀಗಾಗಿ, 15 ದಿನಗಳ ಕಾಲ ಅನಾರೋಗ್ಯದ ರಜೆ ಪಡೆದಿದ್ದ ಪ್ರಭಾಕರನ್ ತನ್ನ ಪೊಲೀಸ್ ಕ್ವಾರ್ಟರ್ಸ್ ನ ಪೂಜಾ ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದರು.

ಅಲ್ಲದೆ, ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಅವರ ಪತ್ನಿ ಮನೆಗೆ ಹಿಂತಿರುಗಿದಾಗ ಪ್ರಭಾಕರನ್ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಕೂಡಲೇ ಅವರನ್ನು ಕೂಡ್ಲೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು.

ಕನಸಿನಲ್ಲಿ ಬಂದು ತನ್ನನ್ನು ಕಾಡುತ್ತಿದ್ದ ದೆವ್ವದ ಭಯದಿಂದ ಪ್ರಭಾಕರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಡಲೂರು ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.