ದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತನಿಖೆ.

31

ನವದೆಹಲಿ: ರಾಜಧಾನಿ ದೆಹಲಿಯ ಹಲವು ಖಾಸಗಿ ಶಾಲೆಗಳಿಗೆ ಇಂದು ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಅಧಿಕಾರಿಗಳು ತ್ವರಿತ ಕ್ರಮಕ್ಕೆ ಮುಂದಾಗಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, 40 ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಬಂದಿವೆ. ಇಮೇಲ್ ಮೂಲಕ ಬೆದರಿಕೆಗಳನ್ನು ಕಳುಹಿಸಲಾಗಿದೆ. ಇನ್ನು ಮುಂದೆ ಬೆದರಿಕೆ ಬರಬಾರದು ಎಂದಾದರೆ 30 ಸಾವಿರ ಡಾಲರ್ ಹಣ ನೀಡಬೇಕು ಇಲ್ಲದಿದ್ದರೆ ಶಾಲಾ ಕಟ್ಟಡಗಳ ಒಳಗೆ ಹಾಕಲಾದ ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಭೀತಿ ಹುಟ್ಟಿಸಲಾಗಿದೆ. ಕಳುಹಿಸಲಾಗಿರುವ ಬೆದರಿಕೆ ಮೇಲ್‍ನಲ್ಲಿ, ನಾನು ಶಾಲೆಗಳ ಕಟ್ಟಡಗಳ ಒಳಗೆ ಅನೇಕ ಬಾಂಬ್‍ಗಳನ್ನು ಇಟ್ಟಿದ್ದೇನೆ. ಬಾಂಬ್‍ಗಳು ಚಿಕ್ಕದಾಗಿದ್ದು ಅಡಗಿಸಿ ಇಡಲಾಗಿದೆ. ಇದರಿಂದ ಕಟ್ಟಡಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ, ಆದರೆ ಬಾಂಬ್‍ಗಳನ್ನು ಸ್ಫೋಟಿಸುವಾಗ ಅನೇಕ ಜನರು ಗಾಯಗೊಳ್ಳಬಹುದು. ನನಗೆ 30 ಸಾವಿರ ಡಾಲರ್ ಹಣ ಬರದಿದ್ದರೆ ಬಾಂಬ್ ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಲಾಗಿದೆ. ಈ ಇಮೇಲ್ ನಿನ್ನೆ ಡಿಸೆಂಬರ್ 8 ರಂದು ರಾತ್ರಿ 11:38 ರ ಸುಮಾರಿಗೆ ಬಂದಿದೆ. ದೆಹಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಇತರ ತುರ್ತು ಸೇವೆಗಳ ಸಹಯೋಗದೊಂದಿಗೆ ತಕ್ಷಣದ ತನಿಖೆಗಳು ಮತ್ತು ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಿಗೆ ಯಾವುದೇ ಭಯವಾಗಬಾರದು ಎಂದು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಸದ್ಯಕ್ಕೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ತನಿಖೆ ಮುಂದುವರಿದಿದೆ. ಅಧಿಕಾರಿಗಳು ನಗರದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ.