ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಬಂಧನ…

59
firstsuddi

ನವದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಿನ್ನೆ ಅವರನ್ನು ಬಂಧಿಸಿದ್ದಾರೆ.

ಕಳೆದ 2015-16ನೇ ಸಾಲಿನಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ. ಇದೇ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಸತ್ಯೇಂದ್ರ ಜೈನ್ ಕುಟುಂಬದ ಒಡೆತನದಲ್ಲಿರುವ 4.81 ಕೋಟಿ ರೂ. ಮೌಲ್ಯದ ಐದು ಸಂಸ್ಥೆಗಳಿಗೆ ಸೇರಿದ ಸ್ಥಿರಾಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. 4 ವರ್ಷಗಳ ಹಿಂದೆ 2018ರಲ್ಲಿ ಇಡಿ ಸತ್ಯೇಂದ್ರ ಜೈನ್ರನ್ನು ವಿಚಾರಣೆಗೆ ಒಳಪಡಿಸಿತ್ತು. ಇದೀಗ ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿರುವ ಎಫ್ ಐಆರ್ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದೀಗ ಸತ್ಯೇಂದ್ರ ಜೈನ್ ರನ್ನು ಬಂಧಿಸಿದೆ.

ಸಚಿವ ಸತ್ಯೇಂದ್ರ ಜೈನ್ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಅಂತ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಜೈನ್ ಅವರು ಎಎಪಿ ಉಸ್ತುವಾರಿಯಾಗಿರುವ ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಂಧಿಸಲಾಗಿದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.