ದೆಹಲಿ ಜೆಎನ್‍ಯುನಲ್ಲಿ ಮಾಂಸಾಹಾರ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ…

90
firstsuddi

ನವದೆಹಲಿ : ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮಾಂಸಾಹಾರದ ವಿಚಾರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥಿಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗಿದ್ದು, 50 ರಿಂದ 60 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ.

ಕಾಲೇಜಿನ ಹಾಸ್ಟೆಲ್ ನಲ್ಲಿ ನೀಡಲಾಗುವ ಊಟದಲ್ಲಿ ರಾಮನವಮಿ ಹಿನ್ನೆಲೆಯಲ್ಲಿ ಮಾಂಸ ನೀಡಬಾರದು ಎಂದು ಎಬಿವಿಪಿ ಸೂಚಿಸಿದೆ. ಈ ವೇಳೆ ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಊಟದ ಮೆನುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದ್ದು, ಎರಡೂ ಕಡೆಯ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾವು ಮಾಂಸಾಹಾರ ತಿನ್ನುವುದಕ್ಕೆ ಎಬಿವಿಪಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಆರೋಪಿಸಿದ್ದು, ಈ ಆರೋಪವನ್ನು ಎಬಿವಿಪಿ ತಳ್ಳಿ ಹಾಕಿದ್ದು, ಎಡಪಂಥೀಯ ಸಂಘಟನೆಗಳು ರಾಮನವಮಿ ಪ್ರಯುಕ್ತ ಹಾಸ್ಟೆಲ್ ನಲ್ಲಿ ಪೂಜೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈ ವೇಳೆ ಘರ್ಷಣೆ ನಡೆದಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಶಾಂತವಾಗಿದ್ದು, ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೈಋತ್ಯ ಡಿಸಿಪಿ ಮನೋಜ್ ಸಿ ತಿಳಿಸಿದ್ದಾರೆ.