ದೇಶ ವಿರೋಧಿ ಚಟುವಟಿಕೆಯ ಶಂಕೆ ; ಚೀನಾದ ಮಹಿಳೆ ಬಂಧನ…

41
firstsuddi

ನವದೆಹಲಿ : ಮಜ್ನು ಕಾ ತಿಲಾ ಪ್ರದೇಶದಲ್ಲಿ ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಚೀನಾದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಗುರುತಿನ ಚೀಟಿಯಲ್ಲಿ ಆಕೆಯ ಹೆಸರು ಡೋಲ್ಮಾ ಲಾಮಾ ಎಂದು ಬರೆಯಲಾಗಿತ್ತು. ಆಕೆಯ ವಿಳಾಸ ನೇಪಾಳದ ರಾಜಧಾನಿ ಕಠ್ಮಂಡು ಎಂದು ತೋರಿಸಿದೆ. ಆದರೆ ಆಕೆಯ ನಿಜ ಹೆಸರು ಕೈ ರೂವೋ ಎಂದು ಪೊಲೀಸರು ತಿಳಿಸಿದ್ದಾರೆ.

ಮಜ್ನು ಕಾ ತಿಲಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬೌದ್ಧ ನಿರಾಶ್ರಿತರು ಇಲ್ಲಿ ವಾಸಿಸುತ್ತಿದ್ದಾರೆ. ಇದರ ಲಾಭವನ್ನು ಪಡೆದುಕೊಂಡ ಈ ಮಹಿಳೆ ತನ್ನ ಗುರುತನ್ನು ಬದಲಾಯಿಸಿಕೊಂಡು ವಾಸಿಸುತ್ತಿದ್ದರು. ಆಕೆ ಬೌದ್ಧ ಸನ್ಯಾಸಿಗಳಂತೆ ಸಾಂಪ್ರದಾಯಿಕ ಕೆಂಪು ನಿಲುವಂಗಿ ಧರಿಸಿಕೊಂಡು, ಕೂದಲನ್ನೂ ಚಿಕ್ಕದಾಗಿ ಕತ್ತರಿಸಿಕೊಂಡಿದ್ದಳು.

ಪೊಲೀಸರು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(ಎಸ್ ಆರ್ ಆರ್ ಒ) ಸಹಯೋಗದಿಂದ ವಶಕ್ಕೆ ಪಡೆದಿರುವ ಮಹಿಳೆಯ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆ 2019ರಲ್ಲಿ ಚೀನಾದ ಪಾಸ್ ಪೋರ್ಟ್‍ನಲ್ಲಿ ಭಾರತಕ್ಕೆ ಬಂದಿರುವುದು ಗೊತ್ತಾಗಿದೆ.

ಚೀನಾದ ಕಮ್ಯೂನಿಸ್ಟ್ ಪಕ್ಷದ ಕೆಲ ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು, ಅದಕ್ಕಾಗಿಯೇ ತನ್ನ ಜೀವ ಉಳಿಸಲು ಭಾರತಕ್ಕೆ ಬಂದಿದ್ದೇನೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಇಂಗ್ಲಿಷ್, ಮ್ಯಾಂಡರಿನ್ ಹಾಗೂ ನೇಪಾಳಿ ಭಾಷೆಗಳನ್ನು ತಿಳಿದಿದ್ದಾಳೆ.