ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ : ಸಚಿವ ಸುರೇಶ್ ಕುಮಾರ್ ಹೇಳಿಕೆ…

123
firstsuddi

ಬೆಂಗಳೂರು: ಕೊರೊನಾ ಎರಡನೇ ಅಲೆ ಸ್ಫೋಟವಾಗುತ್ತಿರುವ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮುಂದಿನ ದಿನಗಳಲ್ಲಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಪ್ರಥಮ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದ್ದು ಪ್ರಥಮ ಪಿಯು ವಿದ್ಯಾರ್ಥಿಗಳೆಲ್ಲರನ್ನೂ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಇಂದು ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆಯ ಬಳಿಕ ಮಾತನಾಡಿದ ಅವರು, ಪರೀಕ್ಷಾ ದಿನಾಂಕಗಳನ್ನು ಪರೀಕ್ಷೆಗಳು ಆರಂಭವಾಗುವುದಕ್ಕೆ 15-20 ದಿನಗಳ ಮುನ್ನವೇ ಪ್ರಕಟಿಸುತ್ತೇವೆ. ಈಗಾಗಲೇ ಪರೀಕ್ಷೆಗೆ ಸಜ್ಜಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವುದರಿಂದ ಯಾವುದೇ ಕಾರಣಕ್ಕೂ ವಿಚಲಿತರಾಗದೇ ಶ್ರದ್ಧೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಎಂದಿನಂತೆ ಎಂದು ಹೇಳಿದರು.

ಇನ್ನೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಮುನ್ನ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತದೆ. ಅಲ್ಲದೆ ಇಲಾಖೆಯ ಯೂಟ್ಯೂಬ್ ಚಾನಲ್ ಮೂಲಕ ಇದೇ ಕೂಡಲೇ ಬ್ರಿಡ್ಜ್ ಕೋರ್ಸ್ ಲಭ್ಯವಾಗುವಂತೆ ಮಾಡಲಾಗುವುದು. ಪರೀಕ್ಷೆ ಮುಂದೂಡಿದ ಕಾರಣದಿಂದ ವಿದ್ಯಾರ್ಥಿಗಳೊಡನೆ ಸತತ ಸಂಪರ್ಕದಲ್ಲಿದ್ದು ಉಪನ್ಯಾಸಕರು ವರ್ಕ್ ಫ್ರಮ್ ಹೋಮ್ ಮಾಡುವಂತೆ ಸಚಿವ ಸುರೇಶ್ ಕುಮಾರ್ ಅವರು ಸೂಚಿಸಿದ್ದಾರೆ.