ಶೆಡ್ ಮೇಲೆ ಬಿದ್ದ ಬೃಹತ್ ಮರ ; ಏಳು ಜನರು ಸಾವು…

44
firstsuddi

ಮುಂಬೈ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಾಲಾಪುರ್ ತೆಹಸಿಲ್ ನ ಪಾರಸ್ ಗ್ರಾಮದಲ್ಲಿ ಶೆಡ್ ಮೇಲೆ ಬೃಹತ್ ಮರವೊಂದು ಬಿದ್ದು ಏಳು ಜನರು ಸಾವನ್ನಪ್ಪಿದ್ದು, ಕನಿಷ್ಠ 30 ಜನರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ದೇವಸ್ಥಾನದ ಧಾರ್ಮಿಕ ಸಮಾರಂಭಕ್ಕೆಂದು ಭಕ್ತರು ಶೆಡ್‍ವೊಂದರಲ್ಲಿ ಜಮಾಯಿಸಿದ್ದರು. ಈ ವೇಳೆ ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಹಳೆಯ ಬೇವಿನ ಮರ ಟಿನ್ ಶೆಡ್ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಕ್ಕೆ ತುರ್ತು ಸೇವೆಗಳನ್ನು ಒದಗಿಸಿದ್ದಾರೆ. ಮರವನ್ನು ಜೆಸಿಬಿ ಮೂಲಕ ಎತ್ತಿಸಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.

ಶೆಡ್ ನ ಅವಶೇಷಗಳ ಅಡಿ 35 ರಿಂದ 40 ಜನರು ಸಿಲುಕಿದ್ದರು. ಅದರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಕೋಲಾ ಜಿಲ್ಲಾಧಿಕಾರಿ ನಿಮ ಅರೋರ ತಿಳಿಸಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾವಿಗೆ ಸಂತಾಪ ಸೂಚಿಸಿದ್ದು, ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದೆ ಎಂದಿದ್ದಾರೆ.