ರಾಯ್ಪುರ: ಛತ್ತೀಸಗಢದ ಬಾಲಕಿಯೊಬ್ಬಳು 10 ತರಗತಿ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಈ ಮೂಲಕ ತಾನು ವೈದ್ಯೆಯಾಗುವ ಭರವಸೆ ಹೊಂದಿರುವುದಾಗಿ ತಿಳಿಸಿದ್ದಾಳೆ.
ನಾರಾಯಣಪುರ ಜಿಲ್ಲೆಯ ಅಬುಜ್ಮದ್ ಪ್ರದೇಶದ ಸೋನ್ವಾರಮ್, ಆರತಿ ಹೆಸರಿನ ನಕ್ಸಲ್ ದಂಪತಿ ಪುತ್ರಿಯಾಗಿರುವ ಬಾಲಕಿ 10ನೇ ತರಗತಿಯಲ್ಲಿ 54.5% ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಅಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ವೈದ್ಯೆಯಾಗಿ ತನ್ನ ಹಳ್ಳಿಯ ಜನರ ಸೇವೆ ಮಾಡಬೇಕೆಂಬ ಭರವಸೆ ಹೊಂದಿದ್ದಾಳೆ.
“ನನಗೆ ಶಿಕ್ಷಣ ಪಡೆಯಲು ಅನೇಕ ತೊಂದರೆಗಳಿವೆ. ಕೆಲವು ದಾಖಲೆಗಳ ಕೊರತೆಯಿಂದಾಗಿ ಮಾದಿಯಾ ಬುಡಕಟ್ಟಿನ ಸದಸ್ಯೆ ಎಂದು ಗುರುತಿಸುವ ಪರಿಶಿಷ್ಟ ಪಂಗಡ (ಎಸ್‌ಟಿ) ಪ್ರಮಾಣ ಪತ್ರ ಮತ್ತು ನಿವಾಸ ಪ್ರಮಾಣ ಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ಮುಂದಿನ ಅಧ್ಯಯನದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಈ ಪ್ರಮಾಣಪತ್ರಗಳು ನನಗೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ. ಆ ಮೂಲಕ ನನ್ನ ಅಧ್ಯಯನವನ್ನು ಮುಂದುವರಿಸಲು ಮತ್ತು ವೈದ್ಯೆಯಾಗುವ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ” ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
ವಿದ್ಯಾರ್ಥಿ ಸಾಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ನಾರಾಯಣಪುರ ಜಿಲ್ಲಾಧಿಕಾರಿ ಅಜೀತ್ ವಸಂತ್, ವಿದ್ಯಾರ್ಥಿಗೆ ಅಗತ್ಯ ದಾಖಲೆಗಳನ್ನು ಪಡೆಯಲು ಸಾಧ್ಯವಿರುವ ಎಲ್ಲಾ ಸಹಾಯ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಿಶೇಷವಾಗಿ ಸಂರಕ್ಷಿತ ಬುಡಕಟ್ಟುಗಳಿಗೆ ಸೇರಿದ ಜನರಿಗೆ ನೀಡುವ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಬಾಲಕಿ ಪಡೆಯುತ್ತಾಳೆ ಎಂದಿದ್ದಾರೆ.










