ನಗರಸಭೆ ಚುನಾವಣೆ : ಬಿಎಸ್‍ಪಿ ಅಭ್ಯರ್ಥಿಯಿಂದ ಬಿರುಸಿನ ಪ್ರಚಾರ…

78
firstsuddi

ಚಿಕ್ಕಮಗಳೂರು : ನಗರಸಭೆ ಚುನಾವಣೆಯ ನಾಲ್ಕನೇ ವಾರ್ಡಿನ ಬಿಎಸ್‍ಪಿ ಅಭ್ಯರ್ಥಿ ಎಸ್.ಸೌಮ್ಯ ಇಂದು ಹಿರೇಮಗಳೂರಿನಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ನಗರಸಭೆಯಲ್ಲಿ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಸ್ವಚ್ಛ ಮತ್ತು ದಕ್ಷ ಆಡಳಿತಕ್ಕಾಗಿ ಈ ಬಾರಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಗ್ರಾಮಸ್ಥರಿಗೆ ಮನವಿ ಮಾಡಿದರು.

ಚಿಕ್ಕಮಗಳೂರು ನಗರಸಭೆ ಭ್ರಷ್ಟಾಚಾರದ ಕೂಪವಾಗಿದೆ. ನಗರದ ಎಲ್ಲಾ ಬಡಾವಣೆಗಳಲ್ಲೂ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು ಅದರಿಂದಾಗಿ ಪರದಾಡುತ್ತಿರುವ ನಾಗರೀಕರು ಈ ಬಾರಿ ಬಿಎಸ್‍ಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಎಸ್.ಸೌಮ್ಯ ಮಾತನಾಡಿ, ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿದಲ್ಲಿ ವಾರ್ಡಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ವರ್, ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ್, ಗೋಪಾಲ್, ರವಿಕುಮಾರ್, ಧನಂಜಯ, ಶೋಭಾ ಹಾಜರಿದ್ದರು.