ಬಾಗಲಕೋಟೆ : ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ 2 ಲಕ್ಷ ರೂ. ಹಣವನ್ನು ಮುಸ್ಲಿಂ ಮಹಿಳೆಯೊಬ್ಬರು ಎಸೆದಿದ್ದಾರೆ.
ಕೆರೂರು ಗುಂಪು ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಇಂದು ಸಿದ್ದರಾಮಯ್ಯ ಅವರು ಬಾಗಲಕೋಟೆ ಬಳಿಯ ಆಶೀರ್ವಾದ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಗಾಯಾಳುಗಳಿಗೆ 2 ಲಕ್ಷ ರೂ. ಕೊಟ್ಟು ಬರುತ್ತಿದ್ದರು. ಈ ವೇಳೆ ಗಾಯಾಳುಗಳಿಗೆ ನೀಡಿದ್ದ ಪರಿಹಾರ ಹಣವನ್ನು ಮರಳಿ ಸಿದ್ದರಾಮಯ್ಯಗೆ ನೀಡಲು ಸಂಬಂಧಿಗಳು ಮುಂದಾದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಣ ಹಿಂಪಡೆದುಕೊಳ್ಳದೆ ವಾಹನದಲ್ಲಿ ಮುಂದೆ ಸಾಗಿದರು. ಆಗ ಮಹಿಳೆಯೊಬ್ಬರು 2 ಲಕ್ಷ ಹಣವನ್ನು ಪೊಲೀಸ್ ಬೆಂಗಾವಲು ವಾಹನಕ್ಕೆಸೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತ ಕೇಳಲು ಬರುತ್ತಾರೆ. ನಂತರ ನಮ್ಮ ಯಾವುದೇ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುತ್ತಿಲ್ಲ. ನಾವೇನೂ ತಪ್ಪು ಮಾಡದೇ ಇದ್ದರೂ, ವಿನಾಕಾರಣ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಇಂದು ಪರಿಹಾರ ಕೊಡ್ತಾರೆ ಸರಿ. ನಾಳೆ ನಮ್ಮವರು ಒಂದು ವರ್ಷದವರೆಗೆ ಬೆಡ್ ರೆಸ್ಟ್ ತೆಗೆದುಕೊಳ್ಳಬೇಕು. ಪ್ರತಿದಿನ ಯಾರು ನಮ್ಮ ಸಮಸ್ಯೆ ಕೇಳುತ್ತಾರೆ? ಎಂದು ಮಹಿಳೆ ಅಳಲು ತೋಡಿಕೊಂಡರು.
ಅಳುವವರ ಜೊತೆ ಒಂದು ದಿನ ಅಳಬಹುದು. ಪ್ರತಿದಿನ ಯಾರೂ ಅಳಲ್ಲ. ಭಿಕ್ಷೆ ಬೇಡಿಯಾದ್ರೂ ಕುಟುಂಬ ಸಾಕುತ್ತೇವೆ. ನಮಗೆ ರೊಕ್ಕಾ-ರುಪಾಯಿ ಬ್ಯಾಡ್ರಿ, ಈ ರೀತಿಯ ಗಲಭೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು. ನಮಗೆ ಬಂದ ಪರಿಸ್ಥಿತಿ ಯಾವ ಹಿಂದೂ, ಮುಸ್ಲಿಮರಿಗೂ ಬರಬಾರದು ಎಂದು ವಿನಂತಿ ಮಾಡಿಕೊಂಡರು. ನಮ್ಮ ತಪ್ಪೇನಾದ್ರೂ ಕುಟುಂಬ ಸಮೇತ ನಾವು ಪೊಲೀಸರಿಗೆ ಶರಣಾಗುತ್ತೇವೆ ಎಂದರು.










