ಬೆಂಗಳೂರು : ಹರ್ಷ ಬೀದಿಯಲ್ಲಿ ಹೆಣವಾಗಿ ಬಿದ್ದಿರುವುದನ್ನು ನೋಡಿದಾಗ ಮನಸ್ಸಿಗೆ ಅತೀವ ವೇದನೆಯಾಗುತ್ತದೆ. ನಮ್ಮದೇ ಸರ್ಕಾರ ಇದ್ದರೂ, ನಮ್ಮ ಕಾರ್ಯಕರ್ತರ ಕೊಲೆ ನಡೆಯುತ್ತದೆ ಎಂದರೆ ನಮಗೆ ನಾಚಿಕೆಯಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಬಾರಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆದಾಗ ನಾವು ಎಸ್ ಡಿಪಿಐ, ಕೆಎಫ್ ಡಿ ಮತ್ತು ಸಿದ್ದರಾಮಯ್ಯ ಸರ್ಕಾರವನ್ನು ಬೈಯುತ್ತಿದ್ದೆವು. ಇದಕ್ಕೆಲ್ಲಾ ಸಿದ್ದರಾಮಯ್ಯ ಸರ್ಕಾರವೇ ಕಾರಣ ಎಂದು ಸಿದ್ದರಾಮಯ್ಯರನ್ನು ದೂರುತ್ತಿದ್ದೆವು. ಆದರೆ, ಇಂದು ನಮ್ಮ ಕಾರ್ಯಕರ್ತರು ಕಷ್ಟಪಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಆದ್ರೆ, ನಮ್ಮದೇ ಸರ್ಕಾರ ಇದ್ದರೂ ಕೂಡ ಈ ರೀತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಮಂಗಳೂರಿನಲ್ಲಿ ಸಿಎಎ ಗಲಾಟೆ ನಡೆದಿದೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣ ಸಂಭವಿಸಿದೆ. ಮಂಗಳೂರಿನಲ್ಲಿ ಗೋಲಿಬಾರ್ ಮತ್ತು ಕೆ ಜಿ ಹಳ್ಳಿಯಲ್ಲಿ ಗಲಭೆ ನಡೆದಾಗ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಂಡಿದ್ದರೆ ಹರ್ಷ ಅವರ ಕೊಲೆ ನಡೆಯುತ್ತಿರಲಿಲ್ಲ. ಈಗಲಾದರೂ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದರು.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಾದಾಗ ಕ್ರಮದ ಭರವಸೆ ನೀಡುತ್ತಾ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಹೈದರಾಬಾದ್ ಅತ್ಯಾಚಾರ ಪ್ರಕರಣದಲ್ಲಿ ಹೇಗೆ ಎನ್ ಕೌಂಟರ್ ಮಾಡಿದ್ರೋ, ಇಲ್ಲಿಯೂ ಅದೇ ರೀತಿ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.










