ಬೆಂಗಳೂರು : ನಮ್ಮ ಮೇಲೆ ನೂರು ಕೇಸ್ ಹಾಕಿದರು ನಾವು ಪಾದಯಾತ್ರೆ ಮಾಡೇ ಮಾಡ್ತೀವಿ. ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆ, ಸದಸ್ಯತ್ವ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಪಕ್ಷದ ಕಚೇರಿಯಲ್ಲಿಂದು ಡಿ ಕೆ ಶಿವಕುಮಾರ್ ಸರಣಿ ಸಭೆ ನಡೆಸಿದ್ದಾರೆ. ಸಭೆಗೂ ಮುನ್ನ ಮಾತನಾಡಿದ ಅವರು, ರಾಮನಗರ ಘಟನೆ ಹಿನ್ನೆಲೆ ಬಿಜೆಪಿಯವರು ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ ಬಿಜೆಪಿಯವರು ಕೇವಲ ರಾಜ್ಯಾದ್ಯಂತ ಅಲ್ಲ, ಇಡೀ ದೇಶಾದ್ಯಂತ ಮಾಡಲಿ. ಅವರ ಸಚಿವರು ಆಡಿರುವ ನುಡಿಮುತ್ತಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಆರ್.ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಮಾಣೀಕರಿಸಿ ಸಮರ್ಥಿಸಿದ್ದಾರೆ. ಅವರಿಗೆ ಇನ್ನಷ್ಟು ಬಿರುದು, ಬಡ್ತಿ ನೀಡಲಿ. ಅವರ ಸಂಸ್ಕೃತಿಯ ದರ್ಶನ ಎಲ್ಲರಿಗೂ ಗೊತ್ತಾಗಿದೆ ಎಂದರು.
ಸೋಂಕು ಹೆಚ್ಚಾದರೆ ಕಾಂಗ್ರೆಸ್ ಹೊಣೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಈಗಾಗಲೇ ನಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಬಿಜೆಪಿಯವರು ಕೋವಿಡ್ ಸಮಯದಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಯಾಕೆ ಅವರ ವಿರುದ್ಧ ಸಮನ್ಸ್ ಜಾರಿ ಮಾಡಿ ಪ್ರಕರಣ ದಾಖಲಿಸಿಲ್ಲ? ಸಚಿವರ ಮೇಲೆ ಪ್ರಕರಣ ಯಾಕಿಲ್ಲ? 100 ನಾಟೌಟ್ ಪ್ರತಿಭಟನೆ ಮಾಡಿದ ನಮ್ಮೆಲ್ಲ ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನೂರು ಪ್ರಕರಣ ದಾಖಲಿಸಿ, ನಮ್ಮನ್ನು ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರುವುದಿಲ್ಲ. ರಾಜ್ಯದ ಜನರ ಪರವಾಗಿ, ಅವರ ಧ್ವನಿಯಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.
ಕೊರೊನಾ ವಿಚಾರವಾಗಿ ವಿಮಾನ ನಿಲ್ದಾಣದಲ್ಲಿ ಯಾವ ರೀತಿ ಕಿರುಕುಳ ನೀಡಲಾಗುತ್ತಿದೆ ಎಂದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಲಿ. ಸಚಿವ ಸುಧಾಕರ್ ಅವರು ಮೊದಲು ಅಲ್ಲಿಗೆ ಹೋಗಿ ನೋಡಲಿ. ನಮ್ಮ ಪಾದಯಾತ್ರೆ ಅದರ ಪಾಡಿಗೆ ನಡೆಯುತ್ತದೆ ಎಂದರು.










