ಚಿಕ್ಕಮಗಳೂರು : ನರ್ಸಿಂಗ್ ವೃತ್ತಿ ಮಾಡ ಬಯಸುವವರು ಮಾತೃ ಹೃದಯಗಳಾಗಿರಬೇಕು ಎಂದು ಫ್ಲಾರೆನ್ಸ್ ನೈಟಿಂಗೇಲ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ನಿವೃತ್ತ ನರ್ಸಿಂಗ್ ಅಧಿಕಾರಿ ಡಿ.ಬಿ.ಶಕುಂತಲಾ ಹೇಳಿದರು.
ನಗರದ ಆಶ್ರಯ ನರ್ಸಿಂಗ್ ಕಾಲೇಜಿನಲ್ಲಿ ಇಂದು ನಡೆದ 18ನೇ ಬ್ಯಾಚಿನ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ದಾದಿಯರು ಸೇವೆಗೆ ಹೆಸರಾದ ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಸೇವೆಯಲ್ಲಿ ಅವರಂತೆ ಆಗಬೇಕು ಎಂದು ಕಿವಿ ಮಾತು ಹೇಳಿದರು.
ನರ್ಸಿಂಗ್ ವೃತ್ತಿ ಮಾನವ ಕುಲಕ್ಕೆ ಸೇವೆ ಸಲ್ಲಿಸುವ ಭಾಗ್ಯ ಒದಗಿಸುವ ಪವಿತ್ರವಾದ ಕೆಲಸ. ದಾದಿಯರು ಅದನ್ನು ಅರಿತು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ರೋಗಿಗಳ ಸೇವೆ ಮಾಡಬೇಕು ಎಂದರು.
ನಮ್ಮ ನೋವನ್ನು ಬದಿಗಿಟ್ಟು ರೋಗಿಗಳನ್ನು ನಮ್ಮ ಕುಟುಂಬದವರೆಂದೇ ಭಾವಿಸಿ, ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಅವರಲ್ಲಿ ಭರವಸೆ ಮತ್ತುಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಡಾ.ಡಿ.ಎಲ್. ವಿಜಯ್‍ಕುಮಾರ್ ಕಳೆದ 18 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಇದೀಗ ಒಂದು ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಕಾಲೇಜನ್ನು ನಿರ್ಮಿಸುತ್ತಿದ್ದು, ಸದ್ಯದಲ್ಲೇ ಲೋಕಾರ್ಪಣೆ ಮಾಡಲಾಗುವುದು. ಈ ವರ್ಷದಿಂದ ಬಿಎಸ್‍ಸಿ ನರ್ಸಿಂಗ್ ತರಗತಿಗಳನ್ನೂ ಆರಂಭಿಸಲಾಗುವುದು ಎಂದು ಹೇಳಿದರು.
ಫ್ಲಾರೆನ್ಸ್ ನೈಟಿಂಗೇಲ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಶಕುಂತಲಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನರ್ಸಿಂಗ್ ಸೇವೆಗಾಗಿ ವಿದೇಶಕ್ಕೆ ತೆರಳುತ್ತಿರುವ ಕಾಲೇಜಿನ ಶಿಕ್ಷಕಿ ನೀತಾ ಶರೂನ್ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳು ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರದ ಎದುರು ಮೇಣದ ಬತ್ತಿಗಳನ್ನು ಬೆಳಗಿ ಪ್ರಮಾಣವಚನ ಸ್ವೀಕರಿಸಿದರು. ಕಾಲೇಜಿನ ನಿರ್ದೇಶಕಿಡಾ ಶುಭಾ ವಿಜಯ್ ಪ್ರತಿಜ್ಞಾವಿಧಿ ಬೋಧಿಸಿದರು.
ಉಪ ಪ್ರಾಂಶುಪಾಲೆ ಶಿಲ್ಪ ವಾರ್ಷಿಕ ವರದಿಯನ್ನು ಮಂಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.










