ನವಿಲು ಬೇಟೆಯಾಡುವಾಗ ಗುಂಡು ತಗುಲಿ ಯುವಕ ಬಲಿ.

35

ಬೆಳಗಾವಿ: ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ನಿನ್ನೆ ನಸುಕಿನ ಜಾವದಲ್ಲಿ ಗುಂಡೇಟಿಗೆ ಯುವಕನೊಬ್ಬ ಬಲಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಗೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ನಂದಗಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆ ಬೆಳಗ್ಗೆ ಹಲಶಿ ನಿವಾಸಿ ಅಲ್ತಾಫ್ ಹುಸೇನ್ ಎಂಬ ವ್ಯಕ್ತಿಯ ಶವವನ್ನು ಯುವಕರ ತಂಡವೊಂದು ಅವರ ಮನೆಗೆ ತಂದಿತು. ತಮ್ಮ ಪುತ್ರನಿಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ತಂದೆ ಮಹಮದಗೌಸ್ ಮಕಾಂದರ್ ಆರೋಪಿಸಿದ್ದಾರೆ. ಮಹಮದ್ ಗೌಸ್ ಮಕಂದಾರ್ ನೀಡಿದ ದೂರಿನ ಮೇಲೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರು ನೀಡಿದ ಕೂಡಲೇ ಅಪರಾಧ ನಡೆದ ಸ್ಥಳಕ್ಕೆಬೈಲಹೊಂಗಲ ಡಿವೈಎಸ್ಪಿ ರವಿನಾಯಕ್, ನಂದಗಡ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸ್ ಸಿ ಪಾಟೀಲ್ ಹಾಗೂ ಖಾನಾಪುರ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ ನಾಯ್ಕ್ ಪರಿಶೀಲನೆ ನಡೆಸಿದರು. ಆರೋಪಿಗಳು ಮತ್ತು ಮೃತ ವ್ಯಕ್ತಿ ಬೇಟೆಗೆ ಹೋದ ಸಂದರ್ಭದಲ್ಲಿ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಭಾನುವಾರ ರಾತ್ರಿ ಯುವಕರ ತಂಡವೊಂದು ಈ ಪ್ರದೇಶದಲ್ಲಿ ಬೇಟೆಯಾಡಲು ತೆರಳಿದ್ದು, ಈ ವೇಳೆ ಸಾವನ್ನಪ್ಪಿರುವ ಘಟನೆ ನಡೆದಿದೆ ಎನ್ನಲಾಗಿದೆ. ಮಹಮದಗೌಸ್ ಮಕಾಂದರ್ ಅವರು ತಮ್ಮ ಮಗನ ಸಾವು ಕೊಲೆಯೇ ಹೊರತು ಆಕಸ್ಮಿಕವಲ್ಲ ಎಂದು ಶಂಕಿಸಿದ್ದಾರೆ.