ಬೆಂಗಳೂರು: ಚಾಮರಾಜ ನಗರದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಜಿ.ಎನ್. ನಂಜುಂಡಸ್ವಾಮಿ ಅವರ ಪುತ್ರ ಲೋಕೇಶ್, ನಟ ಸುದೀಪ್ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಿಚ್ಚನ ಬಗ್ಗೆ ಲೋಕೇಶ್ ಹಗುರವಾಗಿ ಮಾತನಾಡಿದ್ದಕ್ಕಾಗಿ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ಅಲ್ಲದೇ ತಮ್ಮ ನೆಚ್ಚಿನ ನಟನ ಕುರಿತು ಕ್ಷಮೆ ಕೇಳದೇ ಇದ್ದರೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರು.
ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಲೋಕೇಶ್ ಮತ್ತೊಂದು ವಿಡಿಯೋ ಮಾಡಿ, ‘ಸುದೀಪ್ ಅವರು ನನಗೆ ಕರೆ ಮಾಡಿದ್ದರು. ನಮ್ಮವರು ಅವರೆಲ್ಲ ಕ್ಷಮೆ ಕೇಳಿ ಎಂದು ಹೇಳಿದ್ದರು. ಹಾಗಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ’ ಎನ್ನುವ ವಿಡಿಯೋ ಅಪ್ ಲೋಡ್ ಮಾಡಿದ್ದರು. ಅದು ಕೂಡ ವೈರಲ್ ಆಗಿತ್ತು.
ಇದಕ್ಕೆ ಸ್ಪಷ್ಟನೆ ನೀಡಿರುವ ಸುದೀಪ್, ನಾನು ಯಾರಿಗೂ ಫೋನ್ ಮಾಡಿ ಕ್ಷಮೆ ಕೋರುವಂತೆ ಸೂಚಿಸಿಲ್ಲ. ಅಲ್ಲದೆ, ಮತ್ತೊಬ್ಬರ ಬಾಯಲ್ಲಿ ಕ್ಷಮೆ ಕೇಳಿಸಿ ಹೆಮ್ಮೆ ಪಡುವ ವ್ಯಕ್ತಿ ನಾನಲ್ಲ. ಎಂದು ಹೇಳಿರುವ ಅವರು, ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುತ್ತದೆ ಎಂಬುದು ಹಳೇ ಸಿದ್ಧಾಂತ. ಅದು ನಾನು ಹೇಳುತ್ತಿಲ್ಲ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಏನಿದು ವಿವಾದ?
ಕೊಳ್ಳೇಗಾಲದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಸುದೀಪ್ ಪ್ರಚಾರ ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಆಕ್ಷೇಪಿಸಿರುವ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಜಿ.ಎನ್. ನಂಜುಂಡಸ್ವಾಮಿ ಅವರ ಪುತ್ರ ಲೋಕೇಶ್, “ನಮ್ಮ ಕ್ಷೇತ್ರಕ್ಕೆ ಯಾರೇ ಬಂದ್ರೂ ಊಟ ಮಾಡಿ, ಜೇಬಿಗೆ ಹಾಕಿಕೊಂಡು ಹೋಗ್ತಾರೆ” ಎಂದು ಸುದೀಪ್ ಹೆಸರೇಳದೇ ವ್ಯಂಗ್ಯ ಮಾಡಿದ್ದರು ಎನ್ನಲಾಗಿದೆ. ಲೋಕೇಶ್ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.










