ಬೆಂಗಳೂರು : ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ಎಡ್-ಟೆಕ್ ಸಂಸ್ಥೆ ಬೈಜೂಸ್ ಸಿಇಒ ಬೈಜು ರವೀಂದ್ರನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಬೈಜು ರವೀಂದ್ರನ್ ಮತ್ತು ಅವರ ಕಂಪನಿ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಬೆಂಗಳೂರಿನ ಎರಡು ವಾಣಿಜ್ಯ ಮತ್ತು ಒಂದು ವಸತಿ ಪ್ರದೇಶದಲ್ಲಿ ಶೋಧ ನಡೆಸಿದೆ. ಶೋಧದ ವೇಳೆ ಹಲವಾರು ದಾಖಲೆಗಳು ಮತ್ತು ದತ್ತಾಂಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
2011 ರಿಂದ 2023ರ ಅವಧಿಯಲ್ಲಿ ಕಂಪನಿಯು 28,000 ಕೋಟಿ ರೂ. ಹಣವನ್ನು ವಿದೇಶದಿಂದ ನೇರ ಹೂಡಿಕೆ ರೂಪದಲ್ಲಿ ಸ್ವೀಕರಿಸಿರುವುದು ಪತ್ತೆಯಾಗಿದೆ. ಇದೇ ಅವಧಿಯಲ್ಲಿ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಸುಮಾರು 9,754 ಕೋಟಿ ರೂ.ಗಳನ್ನು ರವಾನಿಸಿದೆ ಎಂದು ಇಡಿ ಆರೋಪಿಸಿದೆ.
ಖಾಸಗಿ ವ್ಯಕ್ತಿಗಳಿಂದ ಸ್ವೀಕರಿಸಿದ ವಿವಿಧ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದ್ದು, ಬೈಜು ರವೀಂದ್ರನ್ ಅವರಿಗೆ ಹಲವಾರು ಸಮನ್ಸ್ ಗಳನ್ನು ನೀಡಲಾಗಿತ್ತು. ಆದರೆ ಅವರು ಇದರಿಂದ ತಪ್ಪಿಸಿಕೊಂಡು, ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿಲ್ಲ ಎಂದು ಇಡಿ ಹೇಳಿದೆ.










