ಹೈದರಾಬಾದ್: ಆಂಧ್ರಪ್ರದೇಶ ಬೋರ್ಡ್ ಆಫ್ ಇಂಟರ್ ಮೀಡಿಯೇಟ್ ಎಕ್ಸಾಮಿನೇಷನ್ 11 ಮತ್ತು 12ನೇ ತರಗತಿ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದ ಬಳಿಕ ಆಂಧ್ರಪ್ರದೇಶದಲ್ಲಿ 9 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶ ಇಂಟರ್ ಮೀಡಿಯೇಟ್ ಪರೀಕ್ಷೆ 2023ರ 11 ಮತ್ತು 12ನೇ ತರಗತಿ ಫಲಿತಾಂಶಗಳು ಏಪ್ರಿಲ್ 26ರಂದು ಪ್ರಕಟವಾಗಿದ್ದವು. ಆಂಧ್ರಪ್ರದೇಶ ಪದವಿಪೂರ್ವ ಪರೀಕ್ಷಾ ಮಂಡಳಿಯ ಪರೀಕ್ಷೆಗಳಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. 11ನೇ ತರಗತಿ ಪರೀಕ್ಷೆಯಲ್ಲಿ ಶೇ.61ರಷ್ಟು ಹಾಗೂ 12ನೇ ತರಗತಿಯಲ್ಲಿ ಶೇ.72ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ಗೋಪಾಲಪುರಂ ಗ್ರಾಮದ 17 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿ ಹೆಚ್ಚಿನ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದ. ಇದರಿಂದ ಮನನೊಂದು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಶಾಖಪಟ್ಟಣಂ ಜಿಲ್ಲೆಯ ಮಲ್ಕಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ತ್ರಿನಾದಪುರಂ ಎಂಬಲ್ಲಿ 16 ವರ್ಷದ ಬಾಲಕಿ ಮನೆಯಲ್ಲಿಯೇ ಪ್ರಾಣ ತ್ಯಾಗ ಮಾಡಿದ್ದಾಳೆ. ಕೆಲವು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು ನೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶಾಖಪಟ್ಟಣಂನ ಕಂಚರಪಾಲೆಂನ 18 ವರ್ಷದ ಯುವಕ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಆತ ದ್ವಿತೀಯ ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದ ಎಂದು ತಿಳಿದು ಬಂದಿದೆ.
ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ 17 ವರ್ಷದ ಬಾಲಕ ಹಾಗೂ ಬಾಲಕಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದರಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾರೆ. ವಿದ್ಯಾರ್ಥಿನಿಯು ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದೇ ಜಿಲ್ಲೆಯ ಬಾಲಕ ಕೀಟನಾಶಕ ಸೇವಿಸಿ ಮೃತಪಟ್ಟಿದ್ದಾನೆ.
ಮತ್ತೊಬ್ಬ 17 ವರ್ಷದ ವಿದ್ಯಾರ್ಥಿ ಅನಕಾಪಲ್ಲಿಯಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂಟರ್ ಮೀಡಿಯೇಟ್ ಮೊದಲ ವರ್ಷದಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಆತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಕರ್ನಾಟಕದಲ್ಲಿ ಕಳೆದ ಮಾರ್ಚ್ 21ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗಿತ್ತು. ಇದರ ಬಳಿಕ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮುಡಗೂರು ಗ್ರಾಮದ ನಿವಾಸಿ ವಿಜಯಲಕ್ಷ್ಮಿ (18) ಎಂಬ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಜೆಎಸ್ಎಸ್ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿಯಾಗಿದ್ದ ವಿಜಯಲಕ್ಷ್ಮಿ, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗಾಗಿ (ಕೆಸಿಇಟಿ) ತಯಾರಿ ನಡೆಸಲು ಹಾಸ್ಟೆಲ್ನಲ್ಲಿ ತಂಗಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಫೆಬ್ರವರಿಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಸಾವಿಗೀಡಾದ ವಿದ್ಯಾರ್ಥಿಗಳ ದುಃಖಿತ ಕುಟುಂಬ ಸದಸ್ಯರ ಬಗ್ಗೆ ಮರುಕವಿದೆ ಎಂದು ಹೇಳಿದ್ದರು.










